ಈ ಬಾರಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಲೋಕಸಭೆ ಚುನಾವಣೆ ಗೆಲುವಿಗೆ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಕಾರ್ಯಕರ್ತರು ಮತ್ತು ಅಧಿಕಾರಿಗಳಲ್ಲಿ ಉತ್ಸಾಹ ತುಂಬಿದ ಪ್ರಧಾನಿ ಮೋದಿ ಬಿಜೆಪಿ ಕಾರ್ಯಕರ್ತರು ವರ್ಷದ 24 ಗಂಟೆಗಳ ಕಾಲ ದೇಶ ಸೇವೆ ಮಾಡುತ್ತಿರುತ್ತಾರೆ.
ಆದರೆ ಈಗ ಮುಂದಿನ 100 ದಿನಗಳು ಹೊಸ ಶಕ್ತಿ, ಹೊಸ ಉತ್ಸಾಹ, ಹೊಸ ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕಿದೆ. ಪ್ರತಿಯೊಬ್ಬ ಹೊಸ ಮತದಾರ, ಪ್ರತಿಯೊಬ್ಬ ಫಲಾನುಭವಿ, ಪ್ರತಿವರ್ಗ, ಸಮಾಜ, ಪಂಥ, ಸಂಪ್ರದಾಯವನ್ನು ತಲುಪಬೇಕು. ಎಲ್ಲರ ವಿಶ್ವಾಸ ಗಳಿಸಬೇಕು ಎಂದು ಹೇಳಿದರು.
ನಮ್ಮ ಕನಸುಗಳು ಹಿರಿದಾಗಿದ್ದಾಗ ಅದಕ್ಕೆ ಮಾಡುವ ಸಂಕಲ್ಪಗಳು ಕೂಡ ದೊಡ್ಡದಾಗಿರುತ್ತದೆ. 2047ರ ಹೊತ್ತಿಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲಿದೆ ಇದೇ ಮೋದಿ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ.
ಇಂದು ಬಿಜೆಪಿ ರಾಷ್ಟ್ರೀಯ ಸಮಾವೇಶದ ಎರಡನೇ ದಿನ. ಇಂದು ಪಕ್ಷದ ಹಿರಿಯ ನಾಯಕರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಮುಂದಿನ 100 ದಿನಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಬೇಕು. ಎಲ್ಲ ಮತದಾರರನ್ನು ತಲುಪಬೇಕು. ಪ್ರತಿಯೊಂದು ವರ್ಗವನ್ನು ತಲುಪಬೇಕು. ಎಲ್ಲರ ವಿಶ್ವಾಸ ಗಳಿಸಬೇಕು. ಮತ್ತು ಇದು ಎಲ್ಲರ ಪ್ರಯತ್ನವಾಗಿದ್ದರೆ, ದೇಶಕ್ಕೆ ಸೇವೆ ಸಲ್ಲಿಸಲು ಬಿಜೆಪಿ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಪಡೆಯುತ್ತದೆ ಎಂದರು.
ಬಿಜೆಪಿಯು ಎರಡು ದಿನಗಳ ರಾಷ್ಟ್ರೀಯ ಸಮಾವೇಶವನ್ನು ಹಮ್ಮಿಕೊಂಡಿತ್ತು. ಬಿಜೆಪಿಯ 10 ವರ್ಷಗಳ ಆಡಳಿತದ ಸಾಧನೆಗಳನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಿದರು. ರಾಮಮಂದಿರ, ಕಲಂ 370 ರದ್ದತಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ, ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಮೀಸಲಾತಿ, ತ್ರಿವಳಿ ತಲಾಖ್ ವಿರುದ್ಧದ ಕಾನೂನು ಮತ್ತು ಹೊಸ ಸಂಸತ್ತಿನ ಕಟ್ಟಡದ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದರು.