ಬೆಂಗಳೂರು: ಪಿಎಂ-ಯುಎಸ್‌ಎಚ್‌ಎ ಯೋಜನೆಯಡಿ 100 ಕೋಟಿ ರೂ. ಅನುದಾನ ಘೋಷಿಸುವುದರೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯವು ಗಮನಾರ್ಹ ಉತ್ತೇಜನವನ್ನು ಪಡೆದುಕೊಂಡಿದೆ ಎಂದು ವಿವಿಯ ಉಪಕುಲಪತಿ ಜಯಕರ ಎಸ್.ಎಂ ಹೇಳಿದ್ದಾರೆ.
ದೇಶದ 1,472 ವಿಶ್ವವಿದ್ಯಾಲಯಗಳಲ್ಲಿ ಕೇವಲ 26 ವಿಶ್ವವಿದ್ಯಾಲಯಗಳು ಮಾತ್ರ PM USHA (MERU ) ಮಲ್ಟಿ-ಡಿಸಿಪ್ಲೀನರಿ ಎಜುಕೇಶನ್ ಆಂಡ್ ರಿಸರ್ಚ್ ಯೂನಿವರ್ಸಿಟಿ ಮಾನದಂಡದ ಅಡಿಯಲ್ಲಿ ಸ್ಥಾನ ಪಡೆದಿದೆ. ಅದರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಕೂಡ ಒಂದಾಗಿದೆ. ಈ ಮೂಲಕ ಬೆಂಗಳೂರು ವಿಶ್ವವಿದ್ಯಾಲಯ ಸಂಶೋಧನೆ, ಅನ್ವೇಷಣೆ, ಅಭಿವೃದ್ಧಿ ಕಾರ್ಯಕ್ಕೆ ಮತ್ತಷ್ಟು ಬಲ ತಂದಿದೆ ಎಂದು ತಿಳಿಸಿದ್ದಾರೆ.
ವಿಶ್ವವಿದ್ಯಾಲಯದ ನಿರಂತರ ಶ್ರಮ ಮತ್ತು ಸಂಶೋಧನೆಗೆ ಈ ಅನುದಾನ ಲಭಿಸಿದೆ. ಶಿಕ್ಷಣ, ಸಂಶೋಧನೆ, ಅನ್ವೇಷಣೆ, ವಿದ್ಯಾರ್ಥಿ ಸ್ನೇಹಿ ವಾತಾವರಣಗಳನ್ನು ನಿರ್ಮಿಸಿದ ಗಮನಾರ್ಹ ಸಾಧನೆಗೆ ವಿವಿಗೆ ಅನುದಾನ ದೊರೆತಿದೆ. ಈ ಸಾಧನೆಗೆ ವಿವಿಯ ಪ್ರಾಧ್ಯಾಪಕರು, ನಿರ್ದೇಶಕರು, ಅಧಿಕಾರಿಗಳು ನಿರಂತರ ಪ್ರಯತ್ನವೇ ಕಾರಣವಾಗಿದೆ ಎಂದು ಶ್ಲಾಘಿಸಿದ್ದಾರೆ.
ಸಂಶೋಧನೆ, ಶೈಕ್ಷಣಿಕ ಅಭಿವೃದ್ಧಿ, ಕೌಶಲ್ಯ-ಆಧಾರಿತ ವೃತ್ತಿಪರ ಶಿಕ್ಷಣ, ಉದ್ಯೋಗಾವಕಾಶ, ಉದಯೋನ್ಮುಖ ಕೋರ್ಸ್‌ಗಳು, ಉದ್ಯಮ – ಸಹಭಾಗಿತ್ವ, ಶೈಕ್ಷಣಿಕ ಸುಧಾರಣೆಗಳು, ಗುಣಮಟ್ಟ ಶಿಕ್ಷಣ.
ಇದಲ್ಲದೇ, ಗುಣಮಟ್ಟದ ಶಿಕ್ಷಣ ಮತ್ತು ಸಂಶೋಧನೆಗೆ ವಿಶ್ವವಿದ್ಯಾನಿಲಯದ ಅನುಸರಣೆ ಈ ಗಮನಾರ್ಹ ಸಾಧನೆಯನ್ನು ನೀಡಿದೆ ಎಂದು ಉಪಕುಲಪತಿ ಡಾ. ಜಯಕರ ಎಸ್.ಎಂ ಒತ್ತಿ ಹೇಳಿದರು. ಡಾ.ಜಯಕರ್ ಅವರು ಸಂಶೋಧನೆ ಮತ್ತು ಅನ್ವೇಷಣೆಯನ್ನು ಮುಂದುವರೆಸಲು ವಿಶ್ವವಿದ್ಯಾನಿಲಯದ ನಿರಂತರ ಸಮರ್ಪಣೆಯನ್ನು ಒತ್ತಿ ಹೇಳಿದರು. ಅನುದಾನವು ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ, ಸಂಶೋಧನಾ ಪ್ರಯತ್ನಗಳು ಮತ್ತು ಒಟ್ಟಾರೆ ಅಭಿವೃದ್ಧಿಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ ಎಂದು ಒತ್ತಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡರಿಂದಲೂ ಸಹಕಾರಿ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು.