ನವದೆಹಲಿ : ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧ ಅನಿರೀಕ್ಷಿತವಾಗಿ ಹೆಚ್ಚು ಬೆಳವಣಿಗೆ ಕಂಡಿರುವ ಭಾರತದ ಆರ್ಥಿಕತೆ, ದ್ವಿತೀಯಾರ್ಧದಲ್ಲೂ ಅದೇ ವೇಗ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ಆರ್ಬಿಐನ ಮಾಸಿಕ ವರದಿಯಲ್ಲಿ (RBI monthly bulletin) ಅಂದಾಜು ಮಾಡಲಾಗಿದೆ.
2023-24ರ ಮೊದಲೆರಡು ಕ್ವಾರ್ಟರ್ಗಳಲ್ಲಿ ಭಾರತದ ಜಿಡಿಪಿ ಕ್ರಮವಾಗಿ ಶೇ. 7.8 ಮತ್ತು ಶೇ. 7.6ರಷ್ಟು ಬೆಳೆದಿತ್ತು. ಅಂದರೆ 2023ರ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಶೇ. 7.8, ಜುಲೈನಿಂದ ಸೆಪ್ಟೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಶೇ. 7.6ರಷ್ಟು ಬೆಳೆದಿತ್ತು.
ಮೊದಲ ಎರಡು ಕ್ವಾರ್ಟರ್ಗಳಲ್ಲಿ ಉತ್ತಮ ಬೆಳವಣಿಗೆ ಕಂಡಿರುವ ಭಾರತದ ಆರ್ಥಿಕತೆ ಕೊನೆಯ ಎರಡು ಕ್ವಾರ್ಟರ್ನಲ್ಲೂ ಅದೇ ವೇಗ ಕಾಯ್ದುಕೊಳ್ಳಬಹುದು ಎಂದು ಆರ್ಬಿಐನ ಮಾಸಿಕ ಬುಲೆಟಿನ್ನಲ್ಲಿ ಹೇಳಲಾಗಿದೆ. ಇದೇ ಫೆಬ್ರುವರಿ 29ರಂದು ಸಾಂಖ್ಯಿಕ ಸಚಿವಾಲಯವು ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ ಅವಧಿಯ ಜಿಡಿಪಿ ದರ ಎಷ್ಟೆಂದು ಅಂಕಿ ಅಂಶ ಪ್ರಕಟಿಸಲಿದೆ.
ಒಟ್ಟಾರೆ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಆರು ತಿಂಗಳ ಅವಧಿಯಲ್ಲಿ ಆಗಿರುವ ಜಿಡಿಪಿ ಬೆಳವಣಿಗೆ ಶೇ. 7.7 ಇದೆ. ಈಗ ಅಕ್ಟೋಬರ್ನಿಂದ ಮಾರ್ಚ್ವರೆಗಿನ ಆರು ತಿಂಗಳ ಅವಧಿಯಲ್ಲೂ ಇದೇ ಬೆಳವಣಿಗೆ ಮಟ್ಟ ಕಾಯ್ದುಕೊಳ್ಳಬಹುದು ಎಂದು ಆರ್ಬಿಐ ನಿರೀಕ್ಷಿಸಿದೆ