ಮೊಳಕಾಲ್ಮುರು:-ರಾಯಾಪುರ ಗ್ರಾಮದಲ್ಲಿ ಮಂಗಳವಾರದಂದು ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿಯನ್ನು ಸಾರುವ ಗುಗ್ಗರಿ ಹಬ್ಬವು ಅದ್ದೂರಿಯಾಗಿ ನಡೆಯಿತು.
ಆಧುನಿಕತೆಯ ಭರಾಟೆಯ ನಡುವೆಯೂ ಮ್ಯಾಸಬೇಡ ಬುಡಕಟ್ಟು ಜನರು ಆಚರಿಸುವ ಸಂಪ್ರದಾಯಗಳು ಇಂದಿಗೂ ಕೂಡ ಶ್ರೀಮಂತವಾಗಿರುವುದು ಅತ್ಯಂತ ಹೆಮ್ಮೆಯ ವಿಚಾರವಾಗಿದೆ.
ಗುಗ್ಗರಿ ಹಬ್ಬದ ಪ್ರಯುಕ್ತವಾಗಿ ಪಾಮೂಡ್ಲು ಗುರುನಾಥ ಸ್ವಾಮಿ ದೇವರ ವಿಗ್ರಹ ಮತ್ತು ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಮನೆತನಕ್ಕೆ ಸೇರಿದ ಬೋಸದೇವರ ವಿಗ್ರಹಗಳನ್ನು ಸೋಮವಾರದಂದು ಗರ್ಭದ ಗುಡಿಯಿಂದ ಕರೆ ತಂದು ಗ್ರಾಮದಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯ ನಂತರ ಗ್ರಾಮ ಸಮೀಪದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಪೌಳಿಯಲ್ಲಿ ಕೂರಿಸಿ ವಿವಿಧ ಪೂಜಾ ಕೈಂಕಕಾರ್ಯಗಳನ್ನು ಕೈಗೊಳ್ಳಲಾಗಿತ್ತು.
ಈ ಹಬ್ಬಗಳಲ್ಲಿ ದವಸಧಾನ್ಯಗಳನ್ನು ಪೂಜೆ ಮಾಡಿ ನೈವೇದ್ಯ ಸಲ್ಲಿಸುವುದು ಇಲ್ಲಿನ ಭಕ್ತರ ವಾಡಿಕೆಯಾಗಿದೆ.ವಿಶೇಷವಾಗಿ ಹುರುಳಿಕಾಳಿಗೆ ವಿಶೇಷ ಸ್ಥಾನವನ್ನು ನೀಡಲಾಗುತ್ತದೆ.
ಹಬ್ಬದ ಪ್ರಯುಕ್ತವಾಗಿ ಬುಡಕಟ್ಟು ಸಂಪ್ರದಾಯದಂತೆ ಸೋಮವಾರದಂದು ಮಣೇವು ಅರ್ಪಿಸಲಾಯಿತು,ಹಬ್ಬದಲ್ಲಿ ಪಾಲ್ಗೊಂಡ ಸಾವಿರಾರು ಜನರು ಮ್ಯಾಸಬೇಡರ ಸಂಸ್ಕೃತಿ ಸಂಭ್ರಮವನ್ನು ಕಂಡು ಪುಳಕಿತರಾದರು.
ಹಬ್ಬಕ್ಕೆ ತಾಲೂಕಿನ ಹಲವು ಹಳ್ಳಿಗಳು ಸೇರಿದಂತೆ ಚಿತ್ರದುರ್ಗ,ಚಳ್ಳಕೆರೆ ಮತ್ತು ನೆರೆಯ ಕೂಡ್ಲಿಗಿ ಆಂಧ್ರ ಸೇರಿದಂತೆ ನಾನಾ ಭಾಗಗಳಿಂದ ಸಾವಿರಾರು ಜನರು ಭಾಗಿಯಾಗಿದ್ದರು.