ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲ ಕನ್ನಡಿಗರು ಒಟ್ಟಾರೆ ಬೆಂಬಲಿಸಿದ್ದು ಕನ್ನಡ ನಾಮಫಲಕ ಕಡ್ಡಾಯ ಹೋರಾಟವನ್ನು. ಅದು ಕೇವಲ ಬೆಂಗಳೂರಿಗೆ ಅಷ್ಟೇ ಅಲ್ಲದೇ ರಾಜ್ಯದಾಧ್ಯಂತ ಶೇ.60 ರಷ್ಟು ಕನ್ನಡ ಬಳಕೆ ಮಾಡುವಂತೆ ಒತ್ತಡ ಹಾಕಿದ್ದೇವು, ಬೆಂಗಳೂರು ಅಷ್ಟೇ ಕನ್ನಡೀಕರಣ ಆಗಬಾರದು ಇಡೀ ಕರ್ನಾಟಕ ಕನ್ನಡೀಕರಣ ಆಗಬೇಕಿದೆ. ಫೆ.28 ರವರೆಗೆ ಸರ್ಕಾರಕ್ಕೆ ಗಡುವು ಕೊಟ್ಟಿದ್ದೇವೆ. ಸರ್ಕಾರದ ನಿರ್ಧಾರದ ಬಳಿಕ 31 ಜಿಲ್ಲೆಗಳಲ್ಲಿ ನನ್ನ ನೇತೃತ್ವದಲ್ಲೇ ದೊಡ್ಡ ಮಟ್ಟದ ಹೋರಾಟ ಮಾಡುತ್ತೇವೆ ಎಂದರು.
ನಮ್ಮ ಹೋರಾಟಕ್ಕೆ ಎಂಇಎಸ್ ಆಗಲಿ, ಶಿವಸೇನೆ ಆಗಲಿ ವಿರೋಧಿಸಿದ್ರೆ ನಾವು ಜಗ್ಗಲ್ಲ. ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ್ ಸರ್ವನಾಶವಾಗಲಿ ಎಂದು ನಾರಾಯಣಗೌಡ ಗುಡುಗಿದರು.
ಬೆಳಗಾವಿ ಗಡಿ ವಿವಾದ, ಸರ್ಕಾರಿ ಕಚೇರಿಗಳ ಸ್ಥಳಾಂತರ ಸೇರಿ ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ನಾವು ಅನೇಕ ಬಾರಿ ಆಯಾ ಸರ್ಕಾರದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹಕ್ಕೊತ್ತಾಯಿಸಿದ್ದು, ಅನೇಕ ಬಾರಿ ಹೋರಾಟ ಮಾಡಿದ್ದೇವೆ ಎಂದ ನಾರಾಯಣಗೌಡ, 24ರಂದು ಬೆಳಗಾವಿಯಲ್ಲಿ ಕರವೇ ರಾಜ್ಯ ಕಾರ್ಯಕಾರಿಣಿ ಸಭೆ ಹಮ್ಮಿಕೊಂಡಿದ್ದೇವೆ. ಸಭೆಯಲ್ಲಿ ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ಮೀಸಲು ಸೇರಿ ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿ, ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಬೆಳಗಾವಿ ಅಖಂಡ ಜಿಲ್ಲೆ ಆಗಿರಬೇಕು. ಅಭಿವೃದ್ಧಿ ವಿಚಾರಕ್ಕೆ ಇಲ್ಲಿನ ಜನಪ್ರತಿನಿಧಿಗಳ ಭಾವನೆ ತಿಳಿದುಕೊಳ್ಳಬೇಕಾಗುತ್ತದೆ. ಅದರ ಸಾಧಕ, ಬಾಧಕ ಚರ್ಚಿಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ನಾರಾಯಣಗೌಡರು ತಿಳಿಸಿದರು.
ಕನ್ನಡದ ಗಟ್ಟಿ ಹೋರಾಟವನ್ನು ಸರ್ಕಾರ ಸಹಿಸಲಿಲ್ಲ, ಉದ್ಯಮಿಗಳ ಒತ್ತಡಕ್ಕೆ ಮಣಿದು ನಮಗೆ 14 ದಿನ ಜೈಲಿಗೆ ಕಳಿಸಿದರು, 6ನೇ ಬಾರಿ ನಾನು ಜೈಲಿಗೆ ಹೋಗಿ ಬಂದಿದ್ದೇನೆ, ಆದರೆ ಸಿದ್ದರಾಮಯ್ಯ ಸರ್ಕಾರ ನಡೆದುಕೊಂಡಷ್ಟು ಕಟುವಾಗಿ ಯಾವ ಸರ್ಕಾರವೂ ನಡೆದುಕೊಂಡಿಲ್ಲ, ನನ್ನ ಮೇಲೆ ಇಲ್ಲ ಸಲ್ಲದ ಪ್ರಕರಣಗಳನ್ನು ದಾಖಲಿಸಿದರು.
ನಮ್ಮ ಹೋರಾಟ ಸಮರ್ಥಿಸಿಕೊಂಡು, ಖುಷಿ ಪಡಬೇಕಿತ್ತು. ನನ್ನ ಇಬ್ಬರು ಮಕ್ಕಳು ಹುಟ್ಟುವಾಗಲೂ ನಾನು ಜೈಲಲ್ಲೆ ಇದ್ದೆ. ಜೈಲು, ಕೋರ್ಟ್ ನನಗೇನು ಹೊಸತಲ್ಲ, ಮೂರು ತಿಂಗಳು ಜೈಲಿನಿಂದ ಹೊರಗೆ ಬರದಂತೆ ಷಡ್ಯಂತ್ರ ಮಾಡಿದ್ದರು, ಆದರೆ ನಮ್ಮ ವಕೀಲರು ದೊಡ್ಡ ಹೋರಾಟ ಮಾಡಿ ಜೈಲಿನಿಂದ ಹೊರಗೆ ಕರೆ ತಂದರು. ನಾರಾಯಣಗೌಡರ ಧ್ವನಿಯನ್ನು ನೂರು ಸಿದ್ದರಾಮಯ್ಯ ಸರ್ಕಾರ ಬಂದರೂ ಅಡಗಿಸಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.