Breaking
Mon. Dec 23rd, 2024

ಕೇರಳದ ವಯನಾಡಿನಲ್ಲಿ ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬದವರು ಕರ್ನಾಟಕ ಸರ್ಕಾರ ಘೋಷಿಸಿರುವ 15 ಲಕ್ಷ ರೂಪಾಯಿ

ವಯನಾಡ್, ಫೆಬ್ರವರಿ 27: ಕೇರಳದ ವಯನಾಡಿನಲ್ಲಿ (Wayanad) ಕಾಡಾನೆ ದಾಳಿಗೆ ಮೃತಪಟ್ಟ ವ್ಯಕ್ತಿಯ ಕುಟುಂಬದವರು ಕರ್ನಾಟಕ ಸರ್ಕಾರ (Karnataka Government) ಘೋಷಿಸಿರುವ 15 ಲಕ್ಷ ರೂಪಾಯಿ ಪರಿಹಾರವನ್ನು ತಿರಸ್ಕರಿಸಿದ್ದಾರೆ. ಕರ್ನಾಟಕ ಸರ್ಕಾರ ಪರಿಹಾರ ನೀಡುತ್ತಿರುವುದಕ್ಕೆ ಬಿಜೆಪಿ (BJP) ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಈ ನಿರ್ಧಾರಕ್ಕೆ ಅವರು ಬಂದಿದ್ದಾರೆ. ವಯನಾಡಿನ ಆನೆ ದಾಳಿ ಸಂತ್ರಸ್ತ ಪ್ರಜೀಶ್ನ ಕುಟುಂಬದವರು, ಕರ್ನಾಟಕದ ಪರಿಹಾರದ ಮೊತ್ತ ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಫೆಬ್ರವರಿ 10ರಂದು ಪ್ರಜೇಶ್ ಆನೆ ದಾಳಿಗೆ ಬಲಿಯಾಗಿದ್ದರು.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರವಾದ ವಯನಾಡಿನಲ್ಲಿ ವ್ಯಕ್ತಿಯು ಆನೆ ದಾಳಿಗೆ ಬಲಿಯಾಗಿರುವ ಕಾರಣ ಕಾಂಗ್ರೆಸ್ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ರಾಹುಲ್ ಗಾಂಧಿ ಅವರನ್ನು ಮೆಚ್ಚಿಸುವುದಕ್ಕಾಗಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಜನರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು.

ಪ್ರಜೀಶ್ ಆನೆ ದಾಳಿಗೆ ಬಲಿಯಾದ ಸಂದರ್ಭದಲ್ಲಿ ಭಾರತ ಜೋಡೋ ನ್ಯಾಯ ಯಾತ್ರೆಯಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಅರ್ಧದಲ್ಲೇ ಯಾತ್ರೆ ಮೊಟಕುಗೊಳಿಸಿ ವಯನಾಡಿಗೆ ತೆರಳಿದ್ದರು. ಪ್ರಜೀಶ್ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು. ಇದಾದ ಬೆನ್ನಲ್ಲೇ ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪರಿಹಾರ ಘೋಷಣೆ ಮಾಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಈ ಕ್ರಮ ಕೈಗೊಂಡಿದ್ದಾಗಿ ಖಂಡ್ರೆ ಹೇಳಿದ್ದರು

2023 ರ ನವೆಂಬರ್ 30 ರಂದು ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ದಂತರಹಿತ ಗಂಡು ಆನೆಯನ್ನು ಸೆರೆಹಿಡಿಯಲಾಗಿತ್ತು. ಅದನ್ನು ಬಂಡೀಪುರ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗಿತ್ತು. ಎರಡು ತಿಂಗಳ ನಂತರ ಆ ಆನೆಯು ಕೇರಳದ ವಯನಾಡ್ ಜಿಲ್ಲೆಗೆ ದಾರಿ ತಪ್ಪಿ ತೆರಳಿರುವುದು ಗೊತ್ತಾಗಿತ್ತು. ಫೆಬ್ರವರಿ 10 ರಂದು ಕೇರಳದ ವಯನಾಡ್ ಜಿಲ್ಲೆಯಲ್ಲಿ ಆನೆಯ ದಾಳಿಗೆ ಪ್ರಜೀಶ್ ಸಾವನ್ನಪ್ಪಿದ್ದರು. ಇದು ಕರ್ನಾಟಕದಿಂದ ತೆರಳಿದ ಆನೆಯಿಂದ ಸಂಭವಿಸಿದ್ದು, ಮೃತ ವ್ಯಕ್ತಿಗೆ ಪರಿಹಾರ ನೀಡಬೇಕು ಎಂಬ ಮನವಿ ಸಲ್ಲಿಕೆಯಾಗಿತ್ತು. ಇದರಂತೆ, ಅರಣ್ಯ ಸಚಿವ ಖಂಡ್ರೆ ಅವರು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ ನಂತರ ಪರಿಹಾರ ನೀಡುವುದಾಗಿ ಘೋಷಿಸಿದ್ದರು.

ಆದರೆ, ಕರ್ನಾಟಕ ಸರ್ಕಾರದ ಈ ನಡೆಯು ಬಹಳಷ್ಟು ಟೀಕೆಗೆ ಗುರಿಯಾಗಿತ್ತು. ಪ್ರತಿಪಕ್ಷ ಬಿಜೆಪಿ ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಮಾನವೀಯ ನೆಲೆಯಲ್ಲಿ ಬೇಕಾದರೆ ಕಾಂಗ್ರೆಸ್ ಪಕ್ಷ ಕೇರಳದ ವ್ಯಕ್ತಿಯ ಕುಟುಂಬದವರಿಗೆ ಪರಿಹಾರ ನೀಡಲಿ. ಆದರೆ ರಾಜ್ಯದ ತೆರಿಗೆದಾರರ ಹಣವನ್ನು ಈ ರೀತಿ ವಿನಿಯೋಗಿಸುವುದು ಸರಿಯಲ್ಲ ಎಂದು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು

Related Post

Leave a Reply

Your email address will not be published. Required fields are marked *