ಬೆಂಗಳೂರು: ಸೋಲು ನಮಗೆ, ನಮ್ಮ ಕುಟುಂಬಕ್ಕೆ ಹೊಸದಲ್ಲ. ಹಿಂದೆ ತುಂಬಾ ಜನ ಸೋತಿಲ್ವಾ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ (Rajya Sabha Election) ಎಸ್‌ಟಿ ಸೋಮಶೇಖರ್ (ST Somashekar) ಕ್ರಾಸ್ ವೋಟ್, ಮೈತ್ರಿ ಕೂಟಕ್ಕೆ ಎರಡನೇ ಸೋಲು ವಿಚಾರವಾಗಿ ಮಾತನಾಡಿದ ಅವರು, ನಮ್ಮೆಲ್ಲ ಶಾಸಕರೂ ನಮ್ಮ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಸೋಮಶೇಖರ್ ನಡೆ ನಿರೀಕ್ಷಿತವೇ ಆಗಿತ್ತು. ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ನಿನ್ನೆ ಕಾಂಗ್ರೆಸ್ (Congress) ಶಾಸಕಾಂಗ ಪಕ್ಷದ ಸಭೆಗೆ ಕರೆದುಕೊಂಡು ಹೋದವರು ಯಾರು ಎಂದು ನಮಗೂ ಗೊತ್ತಿದೆ ಎಂದರು.
ಇದು ನಮಗೆ ಸೋಲಲ್ಲ. ಇದು ಮೈತ್ರಿ ಮೇಲೂ, ಲೋಕಸಭೆ ಮೇಲೂ ಪರಿಣಾಮ ಬೀರಲ್ಲ. ಹಿಂದೆ ತುಂಬ ಜನ ಸೋತಿಲ್ವಾ? ದೇವೇಗೌಡ್ರು, ವಾಜಪೇಯಿ ಸೋತಿದ್ದಾರೆ. ಇದೇ ಸಿದ್ದರಾಮಯ್ಯ ಸೋತಿಲ್ವಾ? ನನ್ನ ಮಗನೂ ಎರಡು ಸಲ ಸೋತಿದ್ದಾನೆ. ರಾಜಕೀಯದಲ್ಲಿ ಸೋಲು-ಗೆಲುವು ಸಹಜ ಎಂದು ತಿಳಿಸಿದರು.
ಬೆಂಗಳೂರು ಶಿಕ್ಷಕರ ಚುನಾವಣೆಯಲ್ಲೂ ಆಡಳಿತ ಯಂತ್ರದ ದುರುಪಯೋಗ ಆಗಿತ್ತು. ಈಗಲೂ ರಾಜ್ಯಸಭೆಯಲ್ಲೂ ಆಡಳಿತ ಯಂತ್ರ ದುರುಪಯೋಗಪಡಿಸಿಕೊಂಡಿದ್ದಾರೆ. ಒಂದೊಂದು ಬಾರಿ ಏರಿಕೆ, ಇಳಿಕೆ ಆಗುತ್ತದೆ. ನಮ್ಮ ಕುಟುಂಬ ಸೋತಾಗ ಕುಗ್ಗಲ್ಲ, ಗೆದ್ದಾಗ ಹಿಗ್ಗಲ್ಲ ಎಂದು ಹೇಳಿದರು.
ಸೋಮಶೇಖರ್ ವೀರಾವೇಶದ ಮಾತುಗಳನ್ನು ಹೇಳುತ್ತಿದ್ದರು. ನಮ್ಮ ಉದ್ದೇಶ ಸಕ್ಸಸ್ ಆಗಿದೆ. ಇದು ಬಿಜೆಪಿಗೆ ಶಾಕ್ ಕೊಡುವಂತದ್ದಲ್ಲ. ಬಿಜೆಪಿ ಶಾಸಕರು ವಿಪ್ ಉಲ್ಲಂಘನೆ ಮಾಡಿ ಏನು ಹೇಳಿದ್ರು? ಕುಮಾರಸ್ವಾಮಿ ಅವಕಾಶವಾದಿ ಅಲ್ವಾ ಎಂದು ಪ್ರಶ್ನೆ ಇಟ್ಟಿದ್ದಾರೆ. ಈಗ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಹೋದರಲ್ವಾ? ಅವತ್ತು ಇದೇ ಕಾಂಗ್ರೆಸ್ ನಾಯಕರೇ ನಮ್ಮ ಮನೆ ಬಾಗಿಲಿಗೆ ಬಂದಿದ್ದರು ಎಂದು ಕಿಡಿಕಾರಿದರು.