Breaking
Mon. Dec 23rd, 2024

ನಗರಸಭೆ ಮಾಜಿ ಅಧ್ಯಕ್ಷ ಪೊಲೀಸ್ ಮಲ್ಲಿಕಾರ್ಜುನ್ ನಿಧನ…!

ಚಿತ್ರದುರ್ಗ ಸ್ನೇಹಿತರ ಪಾಲಿನ ಡಿ.ಎಂ ಬಾಸ್ ಇನ್ನಿಲ್ಲ | ನಗರಸಭೆ ಮಾಜಿ ಅಧ್ಯಕ್ಷ ಪೊಲೀಸ್ ಮಲ್ಲಿಕಾರ್ಜುನ್ ನಿಧನ…!

ಸ್ನೇಹಿತರ ಪಾಲಿನ ಡಿ.ಎಂ ಬಾಸ್ ಇನ್ನಿಲ್ಲ ನಗರಸಭೆ ಮಾಜಿ ಅಧ್ಯಕ್ಷ ಪೊಲೀಸ್ ಮಲ್ಲಿಕಾರ್ಜುನ್ ನಿಧನ ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಹಾಗೂ 15 ನೇ ವಾರ್ಡಿನ ಹಾಲಿ ಸದಸ್ಯ ಡಿ.ಮಲ್ಲಿಕಾರ್ಜುನ್ (48) ಅನಾರೋಗ್ಯದಿಂದ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ರಾತ್ರಿ ನಿಧನ ಹೊಂದಿದರು.ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ. ಅವರ ಪಾರ್ಥಿವ ಶರೀರವನ್ನು ನಗರದ ಹೊರವಲಯದ ತಮಟಕಲ್ಲು  ರಸ್ತೆಯ ಶಿವ ಲೇಔಟ್ ನ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪೊಲೀಸ್ ಮಲ್ಲಿಕಾರ್ಜುನ್ ಎಂದೇ ಖ್ಯಾತಿ ಗಳಿಸಿದ್ದ ಮಲ್ಲಿಕಾರ್ಜುನ್ ಚಿತ್ರದುರ್ಗ ಜಿಲ್ಲೆಯಲ್ಲಿ ವರ್ಣರಂಜಿತ ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದರು.ಚಿತ್ರದುರ್ಗದಲ್ಲಿ ಎಂಟತ್ತು ವಾರ್ಡ್ ಗಳಲ್ಲಿ ಹಿಡಿತ ಸಾಧಿಸಿದ್ದ ಅವರು ಚಿತ್ರದುರ್ಗದ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.ಕುಂಚಿಗನಾಳ್ ಗ್ರಾಮದ ಮೂಲ ನಿವಾಸಿ ಆಗಿದ್ದ ಮಲ್ಲಿಕಾರ್ಜುನ್ ತಂದೆ ಸರ್ಕಾರಿ ಆಸ್ಪತ್ರೆ ಅಂಬುಲೆನ್ಸ್ ಚಾಲಕರಾಗಿದ್ದರು . ಆರ್ಥಿಕವಾಗಿ ಅಷ್ಟಾಗಿ ಸುಭದ್ರವಲ್ಲದ ಕುಟುಂಬದಿಂದ ಬಂದ ಮಲ್ಲಿಕಾರ್ಜುನ್, ಕಲಾ ಕಾಲೇಜಿನಲ್ಲಿ ಪದವಿ ಪಡೆದು ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು .

ಓದುವ ದಿನಗಳಲ್ಲಿಯೇ ಕುಸ್ತಿಪಟು ವಾಗಿದ್ದು ಮಲ್ಲಿಕಾರ್ಜುನ್ ವಿವಿ ಮಟ್ಟದಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದರು. ಬಳಿಕ ಅನೇಕ ಬಯಲು ಕುಸ್ತಿ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಗೆಲುವಿನ ನಗೆ ಬೀರಿದ್ದರು.ಪೊಲೀಸ್ ಇಲಾಖೆ ಸೇರಿದ ಬಳಿಕವೂ ದೇಹವನ್ನು ಸದೃಢವಾಗಿಟ್ಡುಕೊಳ್ಳುವಲ್ಲಿ ಕಾಳಜಿ ವಹಿಸಿದ್ದರು.

ಜ್ಞಾನ ವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸ್ಥಾಪಿಸುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲೂ, ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಹಕಾರ ಕ್ಷೇತ್ರದಲ್ಲಿಯೂ, ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದಲ್ಲಿಯೂ, ಓರ್ವ ರಾಜಕಾರಣಿಯಾಗಿ ರಾಜಕೀಯ ಕ್ಷೇತ್ರದಲ್ಲೂ ಹೀಗೆ ಪ್ರತಿ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು.

ಗಣಪತಿ ಹಬ್ಬ, ಜಾತ್ರೆ, ಕ್ರೀಡಾಕೂಟ ಸೇರಿದಂತೆ ಅನೇಕ ಜನಪರ, ಧಾರ್ಮಿಕ ಕಾರ್ಯಗಳಿಗೆ ದೇಣಿಗೆ ನೀಡಿ ಜಿಲ್ಲೆಯಲ್ಲಿ ಸ್ನೇಹಿತರ, ಅಭಿಮಾನಿಗಳ ದೊಡ್ಡ ಪಡೆಯನ್ನೇ ಕಟ್ಡಿಕೊಂಡಿದ್ದರು. ಸ್ನೇಹಿತರು ಎಂದರೇ ಹೆಚ್ಚು ಪ್ರೀತಿ ತೋರುತ್ತಿದ್ದರು ಹಾಗೂ ಅವರ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದ ಕಾರಣಕ್ಕೆ ಅವರ ಪಾಲಿಗೆ ಡಿ.ಎಂ ಬಾಸ್ ಎಂಬ ಅಭಿಮಾನಕ್ಕೆ ಪಾತ್ರರಾಗಿದ್ದರು.

ಬಹುದೊಡ್ಡ ರಾಜಕೀಯ ಕನಸು ಹೊಂದಿದ್ದ ಮಲ್ಲಿಕಾರ್ಜುನ್, ತನ್ನ ಗೆಳೆಯರನ್ನು ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ ಚುನಾವಣೆಗೆ ನಿಲ್ಲಿಸಿ ತಾನೇ ಅಭ್ಯರ್ಥಿ ರೀತಿ ಮುಂದೇ ನಿಂತು ಗೆಲ್ಲಿಸಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಸ್ನೇಹಿತರ, ದುರ್ಗದ ಜನರ ಪ್ರೀತಿ ಗಳಿಸಿದ್ದ ಮಲ್ಲಿಕಾರ್ಜುನ್ ನಿಧನ ಸುದ್ದಿ ಕೇಳುತ್ತಿದ್ದಂತೆ ಸ್ನೇಹಿತರ ದಂಡು ತಂಡೋಪತಂಡವಾಗಿ ತೆರಳಿ ಅಂತಿಮ ದರ್ಶನ ಪಡೆದು ಕಂಬನಿ ಮಿಡಿಯುತ್ತಿದ್ದರು. ಇದೇ ಮಲ್ಲಿಕಾರ್ಜುನ್ ಗಳಿಸಿದ್ದ ಸ್ನೇಹಕ್ಕೆ ಸಾಕ್ಷಿ ಎನ್ನಬಹುದು.

Related Post

Leave a Reply

Your email address will not be published. Required fields are marked *