ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ: ನಾಡಿಯಾ ಜಿಲ್ಲೆಯ ಕೃಷ್ಣಾ ನಗರದಲ್ಲಿ ಪ್ರಧಾನಿ ಮೋದಿ ಸಾವಿರಾರು ಕೋಟಿ ರೂಪಾಯಿಗಳ ಮಹತ್ವದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯಕ್ಕೆ ಭೇಟಿ ನೀಡಿರುವ ಮೋದಿ, ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಪ್ರಚಾರ ಆರಂಭಿಸಿದ್ದಾರೆ.
ಪಶ್ಚಿಮ ಬಂಗಾಳದ (West Bengal) ನಾಡಿಯಾ ಜಿಲ್ಲೆಯ ಕೃಷ್ಣಾ ನಗರದಲ್ಲಿ (Krishna Nagar) 15 ಸಾವಿರ ಕೋಟಿ ರೂಪಾಯಿಗಳ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ನೆರವೇರಿಸಿದರು. ಶುಕ್ರವಾರವಷ್ಟೇ ಮೋದಿ ಅವರು ಪಶ್ಚಿಮ ಬಂಗಾಳದ ಹೂಗ್ಲಿಯ ಅರಾಂಬಾಗ್‌ನಲ್ಲಿ 7,200 ಕೋಟಿ ರೂಪಾಯಿಗಳಿಗೂ ಹೆಚ್ಚು ಮೌಲ್ಯದ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದರು.
ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, 21ನೇ ಶತಮಾನದ ಭಾರತವು ಕ್ಷಿಪ್ರಗತಿಯಲ್ಲಿ ಮುನ್ನಡೆಯುತ್ತಿದೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದಿದ್ದಾರೆ.
ಹಲ್ದಿಯಾ-ಬರೌನಿ ಕಚ್ಚಾ ತೈಲ ಪೈಪ್‌ಲೈನ್‌ಗೆ ಚಾಲನೆ ನೀಡಿದ ಮೋದಿ, ಪರಿಸರದೊಂದಿಗೆ ಸಾಮರಸ್ಯ ಸಾಧಿಸುವುದರ ಜತೆಗೇ ಅಭಿವೃದ್ಧಿಯನ್ನು ಹೇಗೆ ಮಾಡಬಹುದು ಎಂಬುದನ್ನು ಭಾರತವು ಜಗತ್ತಿಗೆ ತೋರಿಸಿದೆ ಎಂದು ಹೇಳಿದ್ದಾರೆ.
ಕೃಷ್ಣಾ ನಗರದಲ್ಲಿ ಬಿಜೆಪಿಯ ವಿಜಯ ನಿರ್ಣಯ ಸಭೆಯಲ್ಲಿ ಭಾಗವಹಿಸಿದ ಪ್ರಧಾನಿ, ರೋಡ್ ಶೋ ನಡೆಸಿದರು. ಬೆಂಬಲಿಗರತ್ತ ಕೈ ಬೀಸಿ ಶುಭಾಶಯ ಕೋರಿದರು.
ಟಿಎಂಸಿ ಸರ್ಕಾರಕ್ಕೆ ‘ಕಮಿಷನ್ ಮೊದಲು, ನಂತರ ಅನುಮೋದನೆ’: ಮೋದಿ ವ್ಯಂಗ್ಯ
ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ರಾಜ್ಯ ಸರ್ಕಾರ ಏನು ಮಾಡುತ್ತಿದೆ ಎಂಬುದಕ್ಕೆ ಬಂಗಾಳದ ಮೊದಲ ಏಮ್ಸ್ ಉದಾಹರಣೆಯಾಗಿದೆ. ಏಮ್ಸ್ ನಿರ್ಮಾಣಕ್ಕೆ ಅನುಮತಿಗೆ ಅವರು ಹಿಂದೇಟು ಹಾಕುತ್ತಿದ್ದಾರೆ. ಅವರಿಗೆ (ಟಿಎಂಸಿ) ಮೊದಲು ಕಮಿಷನ್ ನೀಡಬೇಕು. ನಂತರವಷ್ಟೇ ಅನುಮತಿ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏಮ್ಸ್ ಅನ್ನು ಸ್ಥಾಪಿಸುವಲ್ಲಿ ಸಮಸ್ಯೆಗಳಿವೆ. ಇದಕ್ಕೆ ಅನುಮತಿ ಏಕೆ ತೆಗೆದುಕೊಂಡಿಲ್ಲ ಎಂದು ರಾಜ್ಯ ಸರ್ಕಾರ ಪ್ರಶ್ನಿಸುತ್ತಿದೆ. ಪುಂಡ ಪೋಕರಿಗಳಿಗೆ ಕುಮ್ಮಕ್ಕು ನೀಡುವ ಈ ಸರ್ಕಾರ ಇಷ್ಟು ದೊಡ್ಡ ಆಸ್ಪತ್ರೆಗೆ ಅನುಮತಿ ಪಡೆದಿಲ್ಲ ಎನ್ನುತ್ತಿದೆ. ಕಮಿಷನ್ ನೀಡದಿದ್ದರೆ ತೃಣಮೂಲ ಕಾಂಗ್ರೆಸ್ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ಮೋದಿ ಆರೋಪಿಸಿದ್ದಾರೆ.