ಮಂಗಳೂರು: ಕಡಬದಲ್ಲಿ ಮೂವರು ವಿದ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ಪ್ರಕರಣಕ್ಕೆ ಕಾರಣ ಸಿಕ್ಕಿದ್ದು ಆರೋಪಿ ಪ್ರೇಮ ವೈಫಲ್ಯದದಿಂದ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಕೇರಳ ಮೂಲದ ಎಬಿನ್ (24) ಎಂಬಿಎ ವಿದ್ಯಾರ್ಥಿಯಾಗಿದ್ದು, ಅಲೀನಾ ಎಂಬ ವಿದ್ಯಾರ್ಥಿನಿಯನ್ನು ಟಾರ್ಗೆಟ್ ಮಾಡಿ ಆ್ಯಸಿಡ್ ದಾಳಿ ನಡೆಸಿದ್ದಾನೆ. ಎಬಿನ್ ಹಾಗೂ ಅಲೀನಾ ಒಂದೇ ಕೋಮಿಗೆ ಸೇರಿದವರಾಗಿದ್ದು ಇವರಿಬ್ಬರಿಗೂ ಪರಿಚಯವಿತ್ತು.
ಈತನ ಪ್ರೇಮ ನಿವೇದನೆಯನ್ನು ಒಪ್ಪದ್ದಕ್ಕೆ ಅಲೀನಾಳ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯಿಂದ ಅಲೀನಾ ಗಂಭೀರವಾಗಿ ಗಾಯಗೊಂಡಿದ್ದು, ಪಕ್ಕದಲ್ಲೇ ಇದ್ದ ಉಳಿದಿಬ್ಬರು ವಿದ್ಯಾರ್ಥಿನಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಎಬಿನ್ ಕೇರಳ ಮಲಪ್ಪುರಂ ಜಿಲ್ಲೆಯ ನೆಲಂಬೂರು ನಿವಾಸಿಯಾಗಿದ್ದು, ಅಲೀನಾಳನ್ನು ಟಾರ್ಗೆಟ್ ಮಾಡಿ ಬಂದಿದ್ದ. ಆರೋಪಿ ಶಾಲಾ ಯೂನಿಫಾರ್ಮ್‌ನಲ್ಲಿ ಬಂದಿದ್ದು, ರಬ್ಬರ್ ಹಾಲು ಶೇಖರಣೆಗೆ ಬಳಸುವ ಆ್ಯಸಿಡ್‌ನ್ನು ವಿದ್ಯಾರ್ಥಿನಿಯ ಮೇಲೆ ಎರಚಿದ್ದಾನೆ. ಹೀಗಾಗಿ ಹೆಚ್ಚಿನ ಪ್ರಮಾಣದ ಅಪಾಯ ತಪ್ಪಿದೆ.
ಈ ವೇಳೆ ಈಕೆ ಜೊತೆ ಕುಳಿತು ಓದುತ್ತಿದ್ದ ಇತರ ಇಬ್ಬರು ವಿದ್ಯಾರ್ಥಿನಿಯರ ಮೇಲೂ ಆ್ಯಸಿಡ್ ಬಿದ್ದಿದೆ. ಗಾಯಗೊಂಡವರು ದ್ವಿತೀಯ ಪಿಯುಸಿಯ ವಿಜ್ಞಾನ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮಂಗಳೂರಿನ ಎ.ಜೆ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನಾ ಸ್ಥಳಕ್ಕೆ ಎಸ್‌ಪಿ ರಿಷ್ಯಂತ್, ಪುತ್ತೂರು ಎಸಿ, ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿದ್ದ ಧ್ವಜಸ್ತಂಭದ ಕಟ್ಟೆಯಲ್ಲಿ ಕುಳಿತು ಪರೀಕ್ಷಾ ತಯಾರಿ ನಡೆಸುತ್ತಿದ್ದ ವೇಳೆ ಘಟನೆ ನಡೆದಿದೆ. ಘಟನೆ ನಡೆದ ಬಳಿಕ ಆರೋಪಿ ಎಬಿನ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿ ಎಬಿನ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.