ಖ್ಯಾತ ನಟ ಆಮಿರ್ ಖಾನ್ (Aamir Khan) ಅವರು ಸತತ ಸೋಲಿನಿಂದ ಕಂಗೆಟ್ಟಿದ್ದಾರೆ. ಅವರು ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಸೋತ ಬಳಿಕ ಅವರು ಸ್ಕ್ರಿಪ್ಟ್ ಆಯ್ಕೆಗೆ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಈಗ ಆಮಿರ್ ಖಾನ್ ಅವರು ‘ಸಿತಾರೆ ಜಮೀನ್ ಪರ್’ (Sitaare Zameen Par) ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರ ಒಂದು ಹೊಸ ಗೆಟಪ್ ವೈರಲ್ ಆಗಿದೆ. ಭಯಬೀಳಿಸುವ ರೀತಿಯಲ್ಲಿ ಇರುವ ಅವರ ಫೋಟೋವನ್ನು (Aamir Khan Viral Photo) ನೋಡಿದ ಬಳಿಕ ಆಮಿರ್ ಖಾನ್ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಬಗ್ಗೆಯೇ ಚರ್ಚೆ ಆಗುತ್ತಿದೆ.
ಅಂದಹಾಗೆ, ಆಮಿರ್ ಖಾನ್ ಅವರ ಈ ಹೊಸ ಗೆಟಪ್ ಅಪ್ಲೋಡ್ ಆಗಿರುವುದು ಪಾಪರಾಜಿಯೊಬ್ಬರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ. ಆಮಿರ್ ಖಾನ್ ಅವರು ಇದನ್ನು ಇನ್ನೂ ಶೇರ್ ಮಾಡಿಕೊಂಡಿಲ್ಲ. ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ನಟಿಸುತ್ತಿರುವ ದರ್ಶೀಲ್ ಸಫಾರಿ ಅವರು ಕೂಡ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ‘ಇದು ಆಮಿರ್ ಖಾನ್ ಅವರ ಮಲ್ಟಿವರ್ಸ್. ನಾವೆಲ್ಲರೂ ಅದರಲ್ಲಿ ಜೀವಿಸುತ್ತಿದ್ದೇವೆ ಅಷ್ಟೇ’ ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ. ಹಾಗಾಗಿ ಇದು ನಿಜವಾಗಿಯೂ ಯಾವ ಸಿನಿಮಾದ ಗೆಟಪ್ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಆಮಿರ್ ಖಾನ್ ನಿರ್ದೇಶನ ಮಾಡಿದ್ದ ‘ತಾರೆ ಜಮೀನ್ ಪರ್’ ಸಿನಿಮಾ 2007ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾದಲ್ಲಿ ಆಮಿರ್ ಖಾನ್ ಜೊತೆ ಬಾಲನಟ ದರ್ಶೀಲ್ ಸಫಾರಿ ಅವರು ಅಭಿನಯಿಸಿದ್ದರು. ಈಗ ಬರೋಬ್ಬರಿ 16 ವರ್ಷಗಳ ಬಳಿಕ ಅವರು ‘ಸಿತಾರೆ ಜಮೀನ್ ಪರ್’ ಸಿನಿಮಾದಲ್ಲಿ ಮತ್ತೊಮ್ಮೆ ಒಂದಾಗಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಶೂಟಿಂಗ್ ಸೆಟ್ನಿಂದ ಒಂದು ಫೋಟೋವನ್ನು ದರ್ಶೀಲ್ ಸಫಾರಿ ಅವರು ಇತ್ತೀಚೆಗೆ ಹಂಚಿಕೊಂಡಿದ್ದರು. ಈ ಸಿನಿಮಾ ಬಗ್ಗೆ ಶೀಘ್ರದಲ್ಲೇ ಅಪ್ಡೇಟ್ ಸಿಗಲಿದೆ. ಮತ್ತೊಮ್ಮೆ ಆಮಿರ್ ಖಾನ್ ಮತ್ತು ದರ್ಶೀಲ್ ಸಫಾರಿ ಅವರನ್ನು ಒಟ್ಟಿಗೆ ನೋಡಲು ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾದ ಕಥೆಯ ಬಗ್ಗೆ ಸಿಕ್ಕಾಪಟ್ಟೆ ಕೌತುಕ ಮೂಡಿದೆ.