ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಯುವ ಉತ್ಸಾಹಿ ಎಂ.ಸಿ.ರಘುಚಂದನ್‍ಗೆ ಬಿಜೆಪಿಯಿಂದ ಟಿಕೆಟ್ ನೀಡುವಂತೆ ಸಹಸ್ರಾರು ಅಭಿಮಾನಿಗಳು ಮಂಗಳವಾರ ಶಿವಮೊಗ್ಗಕ್ಕೆ ತೆರಳಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇವರುಗಳನ್ನು ಒತ್ತಾಯಿಸಿ ಶಕ್ತಿ ಪ್ರದರ್ಶಿಸಿದರು.
ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೇ ಸ್ಪರ್ಧಿಸಲು ಉತ್ಸುಕರಾಗಿದ್ದ ಎಂ.ಸಿ.ರಘುಚಂದನ್ ಟಿಕೆಟ್ ಸಿಗಲಿಲ್ಲವೆಂದು ಬೇಸರಪಟ್ಟುಕೊಳ್ಳದೆ ಅಂದಿನಿಂದ ಇಲ್ಲಿಯವರೆಗೂ ಕ್ಷೇತ್ರಾದ್ಯಂತ ಸಂಚರಿಸುತ್ತ ಅಪಾರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪನವರ ಪುತ್ರರಾಗಿರುವ ಎಂ.ಸಿ.ರಘುಚಂದನ್‍ಗೆ ರಾಜಕೀಯದಲ್ಲಿ ಸಾಕಷ್ಟು ಅನುಭವವಿದ್ದು, ಎಲ್ಲೆಡೆ ಮತದಾರರ ಒಲವಿದೆ. ಕ್ಷೇತ್ರದ ಮತದಾರರ ಕಷ್ಟ-ಸುಖ ಹಾಗೂ ಸಮಸ್ಯೆಗಳನ್ನು ಹತ್ತಿರದಿಂದ ಕಂಡಿದ್ದಾರೆ. ಹಾಗಾಗಿ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಟಿಕೆಟ್ ನೀಡಿದರೆ ಗೆಲುವು ಶತಸಿದ್ದ ಎನ್ನುವ ಅಭಿಪ್ರಾಯವನ್ನು ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರರವರ ಮುಂದೆ ಅಭಿಮಾನಿಗಳು ಭಿನ್ನವಿಸಿಕೊಂಡರು.
ಅಭಿಮಾನಿಗಳನ್ನು ಕಂಡು ಪುಳಕಿತಗೊಂಡು ಬಿ.ಎಸ್.ಯಡಿಯೂರಪ್ಪ ಹಾಗೂ ಬಿ.ವೈ.ವಿಜಯೇಂದ್ರ ಇವರುಗಳು ಎಂ.ಸಿ.ರಘುಚಂದನ್‍ಗೆ ಟಿಕೆಟ್ ಕೊಡಿಸುವ ವಿಚಾರವಾಗಿ ಪಕ್ಷದ ನಾಯಕರುಗಳ ಬಳಿ ಚರ್ಚಿಸುವುದಾಗಿ ಭರವಸೆ ನೀಡಿದರು.