Breaking
Tue. Dec 24th, 2024

ಗ್ರಾಮ ಪಂಚಾಯತಿಗಳ ಸೇವೆಗಳಿಗೆ ಅರ್ಜಿ ಸಲ್ಲಿಸಲು ಪಂಚಮಿತ್ರ ನೂತನ ಪೋರ್ಟಲ್ ಅತ್ಯಂತ ಜನಸ್ನೇಹಿ.

ಚಿತ್ರದುರ್ಗ :  ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಪಂಚಮಿತ್ರ ನೂತನ ಪೋರ್ಟಲ್ ಅನ್ನು ಲೋಕಾರ್ಪಣೆಗೊಳಿಸಿದ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಅವರು, ಸಾರ್ವಜನಿಕರು ತಮಗೆ ಅವಶ್ಯವಿರುವ ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಮತ್ತು ವಿವರಗಳನ್ನು ಪಡೆಯಲು ಮತ್ತು ಗ್ರಾಮ ಪಂಚಾಯತಿಗಳ ಸೇವೆಗಳಿಗೆ ಅರ್ಜಿ ಸಲ್ಲಿಸಲು ಪಂಚಮಿತ್ರ ನೂತನ ಪೋರ್ಟಲ್ ಅತ್ಯಂತ ಜನಸ್ನೇಹಿಯಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಅವರು ಮಾತನಾಡಿ, ಗ್ರಾಮೀಣ ಭಾಗದವರು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಹಲವು ಮಾಹಿತಿ ಮತ್ತು ವಿವರ ಪಡೆಯುವ ಸಲುವಾಗಿ ಹಲವಾರು ವೆಬ್ ಸೈಟ್ ಮತ್ತು ಪೋರ್ಟಲ್ ಗಳಲ್ಲಿ ಭೇಟಿ ನೀಡಬೇಕಾಗಿತ್ತು. ಅಲ್ಲದೇ, ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಎಲ್ಲಾ ಬಗೆಯ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಲು ಯಾವುದೇ ನಿರ್ದಿಷ್ಟವಾದ ವೆಬ್ ಸೈಟ್ ಅಥವಾ ಪೋರ್ಟಲ್ ಗಳು ಇರುವುದಿಲ್ಲ.

ಹೀಗಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಬರುವ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಮತ್ತು ವಿವರಗಳನ್ನು ಪಡೆಯಲು, ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಸೇವೆಗಳಿಗೆ ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಲು, ಸಲ್ಲಿಸಿದ ಅರ್ಜಿಗಳ ಸ್ಥಿತಿಗತಿಯನ್ನು ಪರಿಶೀಲಿಸಲು ಹಾಗೂ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ದಾಖಲಿಸಲು, “ಪಂಚಮಿತ್ರ” ಎಂಬ ಒಂದೇ ವೇದಿಕೆಯನ್ನು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಯಿಂದ ಅಭಿವೃದ್ದಿ ಪಡಿಸಿ, ಅನುಷ್ಠಾನಗಳಿಸಲಾಗುತ್ತದೆ. “ಪಂಚಮಿತ್ರ” ಪೋರ್ಟಲ್ ಮೂಲಕ ಈ ಕೆಳಗಿನ ಗ್ರಾಮ ಪಂಚಾಯತಿಗಳ ಮಾಹಿತಿ ಮತ್ತು ವಿವರಗಳನ್ನು ಪಡೆಯಬಹುದಾಗಿದೆ. ಸಾರ್ವಜನಿಕರು ಪಂಚಮಿತ್ರ ಪೋರ್ಟಲ್‍ನ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪಂಚಮಿತ್ರ ಪೋರ್ಟಲ್‍ನಲ್ಲಿ ಏನೇನು ಲಭ್ಯ :

ಚುನಾಯಿತ ಪ್ರತಿನಿಧಿಗಳ ವಿವರಗಳು, ಸಿಬ್ಬಂದಿಗಳ ವಿವರಗಳು, ಪೂರ್ಣಗೊಂಡ ಗ್ರಾಮ ಪಂಚಾಯತ್ ಸಭೆಗಳ ನಡಾವಳಿಗಳು, ಗ್ರಾಮ ಪಂಚಾಯತಿಗಳ ಮುಂಬರುವ ಸಭೆಗಳ ಮಾಹಿತಿ, ಆದಾಯ ಸಂಗ್ರಹ ವಿವರಗಳು, ಸೇವೆಗಳ ವಿವರಗಳು, ಸ್ವ ಸಹಾಯ ಗುಂಪಿನ ವಿವರಗಳು, ಗ್ರಾಮ ಪಂಚಾಯತ್ಗಳ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು ಸೇರಿದಂತೆ ವಿವಿಧ ಮಾಹಿತಿಗಳು ಲಭ್ಯವಿದೆ. ಅಲ್ಲದೆ ಪೋರ್ಟಲ್ ಮೂಲಕ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದ ಈ ಕೆಳಗಿನ ಸೇವೆಗಳಿಗೆ ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಿ, ಸೇವೆಗಳನ್ನು ಪಡೆಯಬಹುದಾಗಿದೆ. ಅರ್ಜಿಗಳ ಸ್ಥಿತಿಗತಿಯನ್ನು ಸಹ ಪರಿಶೀಲಿಸಬಹುದಾಗಿದೆ.

ಲಭ್ಯವಿರುವ ಸೇವೆಗಳು : ಕಟ್ಟಡ ನಿರ್ಮಾಣ ಲೈಸೆನ್ಸ್, ಹೊಸ ನೀರು ಸರಬರಾಜು ಸಂಪರ್ಕ, ನೀರು ಸರಬರಾಜಿನ ಸಂಪರ್ಕ ಕಡಿತ, ಕುಡಿಯುವ ನೀರಿನ ನಿರ್ವಹಣೆ, ಬೀದಿ ದೀಪದ ನಿರ್ವಹಣೆ, ಗ್ರಾಮ ನೈರ್ಮಲ್ಯದ ನಿರ್ವಹಣೆ, ವ್ಯಾಪಾರ ಪರವಾನಗಿ, ಸ್ವಾಧೀನ ಪ್ರಮಾಣಪತ್ರ, ರಸ್ತೆ ಅಗೆವುದಾಕ್ಕಾಗಿ ಅನುಮತಿ, ಕೈಗಾರಿಕಾ/ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ, ನಿರಾಕ್ಷೇಪಣಾ ಪತ್ರ, ನರೇಗಾದಡಿ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ, ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು, ಹೊಸ ಅಥವಾ ಅಸ್ತಿತ್ವದಲ್ಲಿರುವ ದೂರಸಂಪರ್ಕ ಮೂಲಸೌಕರ್ಯ ಗೋಪುರಕ್ಕೆ ಅನುಮತಿ/ನಿಯಮಿತಗೊಳಿಸುವಿಕೆ, ಕೇಬಲ್ ಮೂಲಸೌಕರ್ಯ/ಭೂಗತ ಕೇಬಲ್ ಮೂಲಸೌಕರ್ಯಕ್ಕಾಗಿ ಅನುಮತಿ/ನಿಯಮಿತಗೊಳಿಸುವಿಕೆ, ನಮೂನೆ 9/11ಎ, ನಮೂನೆ 11ಬಿ ಸೇರಿದಂತೆ ಗ್ರಾಮ ಪಂಚಾಯತಿಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರು, ರಸ್ತೆ ಮತ್ತು ಸೇತುವೆಗಳ ದುರಸ್ತಿ, ನರೇಗಾ ಯೋಜನೆಗೆ ಮತ್ತು ಪಂಚಾಯತ್ ರಾಜ್ ವಿಷಯಗಳಿಗೆ ಸಂಬಂಧಿತ ಹಲವು 78 ಬಗೆಯ ಕುಂದುಕೊರತೆಗಳನ್ನು ದಾಖಲಿಸಿ, ನಿವಾರಣೆ ಪಡೆಯಬಹುದಾಗಿದೆ ಹಾಗೂ ಕುಂದುಕೊರತೆಯ ಸ್ಥಿತಿಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಬಹುದಾಗಿದೆ.

ಉಪವಿಭಾಗಾಧಿಕಾರಿ ಕಾರ್ತಿಕ್, ಜಂಟಿಕೃಷಿ ನಿರ್ದೇಶಕ ಮಂಜುನಾಥ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಬಸವನಗೌಡ ಪಾಟೀಲ್ ಸೇರಿದಂತೆ ತಾಲ್ಲೂಕುಗಳ ತಹಸಿಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Related Post

Leave a Reply

Your email address will not be published. Required fields are marked *