Breaking
Tue. Dec 24th, 2024

ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರು ಘೋಷಣೆ ಆಗೋ ಸಾಧ್ಯತೆ..?

ಬೆಂಗಳೂರು, ಮಾರ್ಚ್ 6: ಲೋಕಸಭೆ ಚುನಾವಣೆಗೆ (Lok Sabha Elections) ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಸದ್ಯ ಟಿಕೆಟ್ ಹಂಚಿಕೆಯ ಕಸರುತ್ತು ಜೋರಾಗಿದೆ. ಇಂದು ದೆಹಲಿಯಲ್ಲಿ ಬಿಜೆಪಿ (BJP) ಸಭೆ ನಡೆಯಲಿದ್ದು, ಎರಡನೇ ಪಟ್ಟಿ ಬಿಡುಗಡೆ ಸಂಬಂಧ ಚರ್ಚೆ ನಡೆಯಲಿದೆ. ಚುನಾವಣೆಗೆ ಬಿಜೆಪಿ ಭರದಿಂದ ಸಿದ್ಧತೆ ನಡೆಸುತ್ತಿದೆ.

ಅದರ ಭಾಗವಾಗಿ 195 ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇಂದು ದೆಹಲಿಯಲ್ಲಿ ಪ್ರಧಾನಿ ಮೋದಿ (Narendra Modi) ನೇತೃತ್ವದಲ್ಲಿ ಸಭೆ ನಡೆಯಲಿದ್ದು. ಎರಡನೇ ಪಟ್ಟಿ ಘೋಷಣೆ ಆಗುವ ಸಾಧ್ಯತೆ ಇದೆ. ಅದರಲ್ಲೂ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರು ಘೋಷಣೆ ಆಗೋ ಸಾಧ್ಯತೆ ಇದೆ ಎನ್ನಲಾಗಿದೆ.

ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಟಿಕೆಟ್ ಹಂಚಿಕೆ ಹೇಗಿರಬಹುದು ಎಂಬ ಕುತೂಹಲ ಸೃಷ್ಟಿಯಾಗಿದೆ. ಯಾಕಂದ್ರೆ ಮಂಡ್ಯದಿಂದ ಸ್ಪರ್ಧೆಗೆ ಸುಮಲತಾ ಬೇಡಿಕೆ ಇಟ್ಟಿದ್ದರೆ, ಹಾಸನದಲ್ಲಿ ಜೆಡಿಎಸ್ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದೆ. ಇನ್ನು ಬಿಜೆಪಿಯಲ್ಲೇ ಮಾಜಿ ಸಚಿವರಾದ ವಿ. ಸೋಮಣ್ಣ, ಮಾಧುಸ್ವಾಮಿ, ಸಿ.ಟಿ ರವಿ, ಡಾ. ಕೆ.ಸುಧಾಕರ್, ಬಿ.ಸಿ ಪಾಟೀಲ್ ಸೇರಿ ಇತರರು ಲಾಬಿ ನಡೆಸುತ್ತಿದ್ದಾರೆ. ಹೀಗಾಗಿ ಟಿಕೆಟ್ ಹಂಚಿಕೆ ತೀವ್ರ ಕುತೂಹಲ ಮೂಡಿಸಿದೆ.

ಕಮಲ ಭದ್ರಕೋಟೆ ಗಟ್ಟಿಗೊಳಿಸಲು ನಡ್ಡಾ ಎಂಟ್ರಿ

ಬೆಳಗಾವಿ ಸೇರಿದಂತೆ ಕಿತ್ತೂರು ಕರ್ನಾಟಕದ ಜಿಲ್ಲೆಗಳು ಬಿಜೆಪಿ ಭದ್ರಕೋಟೆ. ಅದನ್ನು ಮತ್ತೆ ಹಾಗೇ ಉಳಿಸಿಕೊಳ್ಳಲು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನಿನ್ನೆ ಸಮಾವೇಶ ಮತ್ತು ಮೀಟಿಂಗ್‌ಗಳಲ್ಲಿ ಭಾಗಿಯಾದರು. ಕಿತ್ತೂರು ಕರ್ನಾಟಕ ಗೆಲ್ಲಲು ನಡ್ಡಾ ತಂತ್ರ ಹೆಣೆದಿದಾರೆ. ನಿನ್ನೆ ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ ಕ್ಷೇತ್ರದ ನಾಯಕರ ಜೊತೆ ಸಾಲು ಸಾಲು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಚುನಾವಣೆ ಗೆಲ್ಲುವ ಬಗ್ಗೆ ತಂತ್ರಗಾರಿಕೆ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಹಿಂದಿನ ಸಾಲಿನಲ್ಲಿ ಕುಳಿತು ಬಿಜೆಪಿ ಶಾಸಕ ಯತ್ನಾಳ್ ಗಮನ ಸೆಳೆದರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಜರಿದ್ದರೆ, ರಮೇಶ್ ಜಾರಕಿಹೊಳಿ‌ ಗೈರಾಗಿದ್ದರು.

ಇತ್ತ ಜೆ.ಡಿ.ಎಸ್ ಕೂಡ ತಂತ್ರಗಾರಿಕೆ ಶುರು ಮಾಡಿದೆ. ಬೆಂಗಳೂರಿನ ಜೆ.ಪಿ ನಗರದಲ್ಲಿರೋ ಮಾಜಿ‌ ಸಿಎಂ ಕುಮಾರಸ್ವಾಮಿ ನಿವಾಸದಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಸಭೆ ನಡೆಸಲಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಸಿಪಿ ಯೋಗೇಶ್ವರ್, ಮುನಿರತ್ನ, ಎಂ.ಕೃಷ್ಣಪ್ಪ ಭಾಗಿಯಾಗಿದ್ದಾರೆ.

Related Post

Leave a Reply

Your email address will not be published. Required fields are marked *