ಬೆಳಗಾವಿ ಸುದ್ದಿ : ಅಥಣಿ : ಕಾಂಗ್ರೆಸ್ ಸರ್ಕಾರ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ ಬಿಜೆಪಿಯವರ ಕಣ್ಣಿಗೆ ಕಾಣುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಶ್ನಿಸಿದ್ದಾರೆ.
ಅಥಣಿಯಲ್ಲಿ ಬುಧವಾರ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಉದ್ಘಾಟನೆ ಸಮಾರಂಭದಲ್ಲಿ ಅವರ ದಿನಾಂಕ. ಕಾಂಗ್ರೆಸ್ ಎಂದರೆ ಬದ್ದತೆ, ಬಸವಣ್ಣನವರು ಕಂಡ ಸಮಾನತೆಯ ಕನಸನ್ನು ನನಸು ಮಾಡುವ ಪಕ್ಷ. ಆದರೆ ಬಿಜೆಪಿಯವರು ನಮ್ಮ ಗ್ಯಾರಂಟಿಗಳ ಬಗ್ಗೆ ಬಹಳಷ್ಟು ಕೀಳಾಗಿ ಇದ್ದಾರೆ. ಗ್ಯಾರಂಟಿ ಸುಳ್ಳು ಹೇಳಿದರು, ಗ್ಯಾರಂಟಿಯಿಂದ ಮಹಿಳೆಯರು ದೇವಸ್ಥಾನಗಳಿಗೆ ತಿರುಗುತ್ತಿದ್ದಾರೆ, ಗಂಡಸರು ಕುಡಿದು ಹಾಳಾಗುತ್ತಿದ್ದಾರೆ ಎಂದು ಅವಮಾನ ಮಾಡಿದರು. ಆದರೆ ಮಹಿಳಾ ಸ್ವಾವಲಂಬನೆ ಕಾಂಗ್ರೆಸ್ ಬದ್ದತೆ. ಅದನ್ನು ಅತ್ಯಂತ ಸಮರ್ಥವಾಗಿಸಿದ್ದೇವೆ ಎಂದು ಅವರು ಹೇಳಿದರು.
1.20 ಕೋಟಿ ಮನೆಯ ಯಜಮಾನಿಯರು ಗೃಹಲಕ್ಷ್ಮೀ ಯೋಜನೆ ಲಾಭ ಪಡೆಯುತ್ತಿದ್ದಾರೆ. ಎಲ್ಲ 5 ಗ್ಯಾರಂಟಿಗಳನ್ನು ಬಹಿರಂಗಪಡಿಸುತ್ತಿರುವ ಕಾಂಗ್ರೆಸ್ ಪಕ್ಷವು ಜನಪ್ರಿಯತೆಯನ್ನು ಪಡೆಯುವುದನ್ನು ಬಿಜೆಪಿಯವರು ಸಹಿಸಿಕೊಳ್ಳುವುದಿಲ್ಲ. 5 ಗ್ಯಾರಂಟಿ ಯೋಜನೆಗೆ ತಿಂಗಳಿಗೆ 5 ಸಾವಿರ ಕೋಟಿ ರೂ ನೀಡಲಾಗುತ್ತಿದೆ. ಜೊತೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಯೋಜನೆಗಳನ್ನು ನೀಡುತ್ತಿರುವುದು ಬಿಜೆಪಿಯವರಿಗೆ ಕಣ್ಣಿಗೆ ಕಾಣುತ್ತಿಲ್ಲ. ಅವರಿಗೆ ಭ್ರಮನಿರಸನವಾಗಿದೆ ಎಂದು ಹೆಬ್ಬಾಳಕರ್ ಹೇಳಿದರು.
ಕೇವಲ ಶ್ರೀಮಂತರು ಶ್ರೀಮಂತರಾದರೆ ರಾಷ್ಟ್ರ ಬೆಳೆಯುವುದಿಲ್ಲ. ಬಡವರ ಹೊಟ್ಟೆ ತುಂಬಬೇಕು, ಬಡವರು ಸ್ವಾವಲಂಬಿ ಜೀವನ ನಡೆಸಬೇಕು. ಅಂತಹ ಅವಕಾಶವನ್ನು ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಲಕ್ಷ್ಮಣ ಸವದಿಯವರು ತಮ್ಮ ಕ್ಷೇತ್ರದ ಜನರಿಗೆ ನೀರಾವರಿ ಯೋಜನೆ ಬೇಕೆನ್ನುವ ಬೇಡಿಕೆಯನ್ನು ಮಾತ್ರ ಕಾಂಗ್ರೆಸ್ ಸೇರುವಾಗ ಇಟ್ಟಿದ್ದರು. ಅದರಂತೆ ಈಗ 1486 ಕೋಟಿ ರೂ.ಗಳ ಈ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಮಂಜೂರಾಗಿದೆ. ನನ್ನ ಕ್ಷೇತ್ರಕ್ಕೆ ಕೂಡ 800 ಕೋಟಿ ರೂ.ಗಳ ಯೋಜನೆ ಮಂಜೂರು ಮಾಡಿದೆ. 2018ರಲ್ಲೇ ಯೋಜನೆ ಮಂಜೂರಾಗಿತ್ತು. ಆದರೆ ನಂತರ ಬಂದ ಸರ್ಕಾರ ನನಗೆ ಹೆಸರು ಬರುತ್ತದೆ ಎಂದು ಹೇಳಿ ನನ್ನ ಕ್ಷೇತ್ರದ ಯೋಜನೆ ತಡೆದಿದ್ದರು. ಈಗ ಮತ್ತೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರು ಯೋಜನೆಗೆ ಮಂಜೂರಾತಿ ನೀಡಿದ್ದಾರೆ. ಅವರಿಗೆ ನಾನು ಕೋಟಿ ಕೋಟಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದ ಅವರು, ಬರುವ ಲೋಕಸಭಾ ಚುನಾವಣೆಯಲ್ಲಿ ನಮಗೆ ಆಶೀರ್ವಾದ ಮಾಡಿ ಎಂದು ಕೋರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏತ ನೀರಾವರಿ ಯೋಜನೆಯನ್ನು ಉದ್ಘಾಟಿಸಿದರು. ಶಾಸಕರಾದ ಲಕ್ಷ್ಮಣ್ ಎಂ ಸವದಿ ಅವರ ಅಧ್ಯಕ್ಷತೆಯಲ್ಲಿ ವಹಿಸಿದ್ದ ಕಾರ್ಯಕ್ರಮದಲ್ಲಿ ಡಿಸಿಎಂ ಹಾಗೂ ಬೃಹತ್ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ, ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಬ ಹಟ್ಟಿಹೊಳಿ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್, ಶಾಸಕರಾದ ಮಹೇಂದ್ರ ತಮ್ಮಣ್ಣವರ, ಅಶೋಕ ಮ ಪಟ್ಟಣ, ಮಹಾರಾಷ್ಟ್ರದ ಮಾಜಿ ಸಚಿವ ವಿಶ್ವಜಿತ್ ಕದಂ ಸೇರಿ ಹಲವು ನಾಯಕರು ವೇದಿಕೆಯಲ್ಲಿದ್ದರು.