ದೆಹಲಿ, ಮಾ.8: ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ಶೀಘ್ರ ಬಿಡುಗಡೆ ಮಾಡಲು ಬದ್ಧವಾಗಿದೆ ಎಂದು ಕೇಂದ್ರವು ಇಂದು (ಮಾ.8) ಹೇಳಿದೆ. ಭಾರತೀಯರನ್ನು ವಂಚಿಸಿ ರಷ್ಯಾದ ಸೇನೆಯೊಂದಿಗೆ ಕೆಲಸ ಮಾಡಲು ನೇಮಿಸಲಾಗಿದೆ.
ಇದೀಗ ಅಲ್ಲಿರುವ ಭಾರತೀಯ ಪ್ರಜೆಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಲು ನಾವು ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಲಾಗಿದೆ.ಸುಳ್ಳು ನೆಪ ಮತ್ತು ಭರವಸೆಗಳನ್ನು ನೀಡಿ ಭಾರತೀಯ ನಾಗರಿಕರನ್ನು ಸೇನೆಗೆ ನೇಮಕ ಮಾಡಿಕೊಂಡಿರುವ ಏಜೆಂಟರು ಮತ್ತು ಕಾನೂನು ವಿರುದ್ಧವಾದ ಅಂಶಗಳು ಕಂಡು ಬಂದಿದ್ದು, ಅವರ ವಿರುದ್ಧ ಬಲವಾದ ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ರಷ್ಯಾದ ಸೈನ್ಯದೊಂದಿಗೆ ಸಹಾಯಕ ಉದ್ಯೋಗಗಳಿಗಾಗಿ ಏಜೆಂಟ್‌ಗಳು ನೀಡುವ ಕೊಡುಗೆಗಳಿಂದ ವಂಚಿತರಾಗದಂತೆ ಭಾರತೀಯ ಪ್ರಜೆಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿಕೊಂಡಿದೆ.
ರಷ್ಯಾ ಮತ್ತು ಉಕ್ರೇನ್ ಸೇರಿದಂತೆ ವಿದೇಶದಲ್ಲಿ ಲಾಭದಾಯಕ ಉದ್ಯೋಗಗಳ ನೀಡುವುದಾಗಿ ಪೊಳ್ಳು ಭರವಸೆಯನ್ನು ನೀಡಿ, ಯುವಜನರನ್ನು ಗುರಿಯಾಗಿಸಿಕೊಳ್ಳುವ ಪ್ರಕರಣಗಳು ಹೆಚ್ಚಾಗಿದೆ. ಹಾಗೂ ದೇಶಾದ್ಯಂತ ನಡೆಯುತ್ತಿರುವ ಮಾನವ ಕಳ್ಳಸಾಗಣೆ ಜಾಲವನ್ನು ಕೇಂದ್ರೀಯ ಬ್ಯೂರೋ (ಸಿಬಿಐ) ಭೇದಿಸಿದ್ದು, ಈ ಸಮಯದಲ್ಲಿ ಈ ಘಟನೆ ನಡೆದಿದೆ. ಈಗಾಗಲೇ ಉಕ್ರೇನ್ ಮತ್ತು ರಷ್ಯಾದಲ್ಲಿ ಯುದ್ಧ ನಡೆಯುತ್ತಿದೆ, ಇದನ್ನೇ ಲಾಭ ಮಾಡಿಕೊಂಡು ಏಜೆಂಟ್ಗಳು ಈ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ.
ರಷ್ಯಾ ಪರ ಹೋರಾಡಿ ಇಬ್ಬರು ಭಾರತೀಯರು ಸಾವನ್ನಪ್ಪಿದ್ದಾರೆ : ಇನ್ನು ರಷ್ಯಾದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಇಬ್ಬರು ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಪ್ರಜೆ ಮೊಹಮ್ಮದ್ ಅಸ್ಫಾನ್ ಅವರು ಸಾವನ್ನಪ್ಪಿರುವ ಬಗ್ಗೆ ಮಾರ್ಚ್ 6 ರಂದು ಎಕ್ಸ್ನಲ್ಲಿ ತಿಳಿಸಿದೆ.
ಹೈದರಾಬಾದ್‌ನ 30 ವರ್ಷದ ವ್ಯಕ್ತಿ ಕಳೆದ ವರ್ಷದ ಕೊನೆಯಲ್ಲಿ ರಷ್ಯಾಕ್ಕೆ ಪ್ರಯಾಣ ಬೆಳೆಸಿದ್ದು, ಕಳೆದ ತಿಂಗಳು ಯುದ್ಧ ನಡೆಯುತ್ತಿದ್ದ ವಲಯದಲ್ಲಿ ಇಬ್ಬರು ಭಾರತೀಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದಕ್ಕೂ ಮೊದಲು, ಗುಜರಾತ್‌ನ ಸೂರತ್‌ನ ನಿವಾಸಿ 23 ವರ್ಷದ ಹೇಮಲ್ ಅಶ್ವಿನ್‌ಭಾಯ್ ಮಂಗುಕಿಯಾ ಅವರು ರಷ್ಯಾ ಆಕ್ರಮಿತ ಉಕ್ರೇನ್‌ನ ಒಂದು ಭಾಗವಾದ ಡೊನೆಟ್ಸ್ಕ್‌ನಲ್ಲಿ ರಷ್ಯಾದ ಸೈನ್ಯದೊಂದಿಗೆ ಭದ್ರತಾ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದಾಗ ಉಕ್ರೇನಿಯನ್ ನಡೆಸಿದ ವಾಯುದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ದೆಹಲಿ, ತಿರುವನಂತಪುರಂ, ಮುಂಬೈ, ಅಂಬಾಲಾ, ಚಂಡೀಗಢ, ಮಧುರೈ ಮತ್ತು ಚೆನ್ನೈನ 13 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದೆ. ಏಜೆಂಟ್ಗಳು ವಿದೇಶಕ್ಕೆ ಮಾನವ ಕಳ್ಳಸಾಗಣೆಯನ್ನು ಮಾಡಿರುವ 35 ಪ್ರಕರಣಗಳು ಬೆಳಕಿಗೆ ಬಂದಿದೆ.