ಚಿತ್ರದುರ್ಗ : ಮುದ್ದೆಯಂತ ಊಟವಿಲ್ಲ ಸಿದ್ದಪ್ಪನಂತ ದೇವರಿಲ್ಲ, ಶಿವ ಶಿವ ಎಂದರೆ ಭಯವಿಲ್ಲ, ಶಿವ ನಾಮಕೆ ಸಾಟಿ ಬೇರಿಲ್ಲ… ಹೀಗೇ ಅನೇಕ ರೀತಿ ನಮ್ಮ ಪೂರ್ವಿಕರು ಶಿವನ ಕುರಿತು ತಮ್ಮದೇ ಭಾಷೆಯಲ್ಲಿ, ಭಕ್ತಿ ಭಾವದಲ್ಲಿ ಸ್ಮರಿಸುತ್ತಾರೆ.
ಆಡಂಬರ ಬಯಸದ ಸರ್ವರ ಪೂಜೆಗೂ ಸಲ್ಲುವ ದೈವ ಎಂಬ ನಂಬಿಕೆ ಜನರ ಮನದಲ್ಲಿ ದಟ್ಟವಾಗಿದೆ.ಈ ಕಾರಣಕ್ಕೆ ಶಿವನ ಆರಾಧನೆ ವಿಶೇಷತೆ ಪಡೆದುಕೊಂಡಿದೆ. ಶಿವನ ದೇವಾಲಯಗಳು ಇಲ್ಲದ ಊರುಗಳೇ ಇಲ್ಲ ಎನ್ನಬಹುದು. ಅದರಲ್ಲೂ ಶಿವನ ಆರಾಧನೆಗಾಗಿಯೇ ಶಿವರಾತ್ರಿ ಮಹೋತ್ಸವದಲ್ಲಿ ಭಾರತದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.
ಶಿವರಾತ್ರಿ ಆಚರಣೆ ಕುರಿತು ಹಿನ್ನೆಲೆಯಿದ್ದು, ಅನೇಕ ಕಥೆಗಳು ಜನಪದರ ಬಾಯಲ್ಲಿ ಹರಿದಾಡುತ್ತವೆ. ಈಶ್ವರನು ಪಾರ್ವತಿ ದೇವಿಯನ್ನು ವಿವಾಹವಾದ ದಿನವೇ ಶಿವರಾತ್ರಿ ಎಂಬುದು ನಂಬಿಕೆ.
ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಜಗತ್ತಿನ ರಕ್ಷಣೆಗಾಗಿ ಶಿವನು ವಿಷ ಕುಡಿಯುತ್ತಾನೆ. ಆ ವಿಷ ಗಂಟಲ ಕೆಳಗೆ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಮಹಿಮೆ. ಈ ಕಾರಣಕ್ಕೆ ಶಿವನನ್ನು ವಿಷಕಂಠನೂ ಎಂದು ಕರೆಯಲಾಗುತ್ತದೆ.
ಜನರ ಆರಾಧ್ಯ ದೈವವಾದ ಶಿವನ ದೇವಾಲಯಗಳು ಕೋಟೆನಾಡು ಚಿತ್ರದುರ್ಗದಲ್ಲಿ ನೂರಾರು ಇವೆ. ಈ ಪ್ರದೇಶ ಶೈವಪಂಥದ ಭೂಮಿ ಎಂಬುದಕ್ಕೆ ಇಲ್ಲಿನ ಅನೇಕ ದೇಗುಲಗಳು ಸಾಕ್ಷಿಯಾಗಿವೆ.
ಶಿವಲಿಂಗ ಸ್ಥಾಪನೆಯ ಜೊತೆಗೆ ಈ ಶಿವಾಲಯಕ್ಕೆ ಬೇಕಾಗುವ ದೈನಂದಿನ ಖರ್ಚುಗಳಿಗೆ ತಮ್ಮ ಕೈಲಾದ ಮಟ್ಟಿಗೆ ದಾನ ದತ್ತಿಗಳನ್ನು ನೀಡಿದ್ದಾರೆ. ಚಿತ್ರದುರ್ಗ ನಗರಕ್ಕೆ ಸೀಮಿತವಾಗಿ ಹತ್ತಾರು ಬಡಾವಣೆಗಳು ಇಂದು ನಗರದ ವ್ಯಾಪ್ತಿಯೊಳಗೆ ಬಂದಿದ್ದರೂ ಹಿಂದೆಲ್ಲ ಈ ಬಡಾವಣೆಗಳು ನಗರದ ಹೊರಗಿನ ಗ್ರಾಮಗಳಾಗಿದ್ದವು.
ಕೋಟೆ ರಸ್ತೆಯ ಆನೆಬಾಗಿಲ ಬಳಿ ಈ ದೇವಾಲಯವಿದೆ. ನೆಲಮಟ್ಟದಿಂದ ಕೆಳಭಾಗಕ್ಕೆ 18 ಅಡಿ ಕೆಳಭಾಗದಲ್ಲಿ ಇರುವ ಈ ದೇವಾಲಯದಲ್ಲಿ ಪಾತಾಳೇಶ್ವರ ಶಿವಲಿಂಗವನ್ನು ಪೂಜಿಸಲಾಗುತ್ತದೆ. ಪಾತಾಳದಲ್ಲಿರುವುದರಿಂದ ಪಾತಾಳೇಶ್ವರ ಎಂಬ ಅಭಿದಾನ, ಗರ್ಭಗುಡಿ ಮತ್ತು ಮದ್ಯರಂಗ ಎರಡೇ ಈ ದೇವಾಲಯದ ಭಾಗಗಳು ಗರ್ಭ ಗುಡಿಯಲ್ಲಿನ ಮದ್ಯಭಾಗದಲ್ಲಿ ಪಾತಾಳೇಶ್ವರ, ಎಡಕ್ಕೆ ಪಾರ್ವತಿ ದೇವಿ ಇದ್ದು ಮುಂಭಾಗದಲ್ಲಿ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ.
ಉಮಾಮಹೇಶ್ವರ ದೇವಸ್ಥಾನ: ರಂಗಯ್ಯನ ಬಾಗಿಲಿನಿಂದ ಕರುವಿನಕಟ್ಟೆಗೆ ಹೋಗುವ ರಸ್ತೆಯಲ್ಲಿ ಈ ದೇವಾಲಯವಿದೆ. ಪಾಳೆಯಗಾರರ ಕಾಲದ ನಿರ್ಮಾಣ ಇದಾಗಿದೆ.
ಬೀರಗಲ್ಲೇಶ್ವರ ದೇವಾಲಯ: ದೊಡ್ಡಪೇಟೆ ಮುಖ್ಯರಸ್ತೆಯ ಜೈನ ಮಂದಿರದಿಂದ ಮೇಲ್ಭಾಗಕ್ಕೆ ಹೋಗುವ ಕಂಬಳಿ ಬೀದಿ ರಸ್ತೆಯಲ್ಲಿ ಈ ದೇವಾಲಯವಿದೆ.
ಚಂದ್ರಮೌಳೇಶ್ವರ ದೇವಾಲಯ : ಜೋಗಿಮಟ್ಟಿ ರಸ್ತೆಯ ಶೃಂಗೇರಿ ಮಠದ ಆವರಣದಲ್ಲಿ ಚಂದ್ರಮೌಳೇಶ್ವರ ಸ್ವಾಮಿ ದೇವಾಲಯವಿದೆ.
ನೀಲಕಂಠೇಶ್ವರ ಸ್ವಾಮಿ ದೇವಾಲಯ: 17ನೇ ಶತಮಾನದಲ್ಲಿ ಬಿಚ್ಚುಗತ್ತಿ ಭರಮಣ್ಣ ನಾಯಕನ ಕಾಲದಲ್ಲಿ ಸ್ಥಾಪನೆಯಾದ ದೇವಾಲಯ ಇದಾಗಿದೆ. ನಗರದ ಪ್ರಮುಖ ದೇವಾಲಯವಾದ ಇಲ್ಲಿಂದ ನಗರದ ಕಾರ್ಯಕ್ರಮಗಳು ಶುರುವಾಗುತ್ತದೆ.
ಕೋಟೆಯ ಸಂಪಿಗೆ ಸಿದ್ದೇಶ್ವರ ದೇವಾಲಯ : 1328 ರಲ್ಲಿ ಹೊಯ್ಸಳರ ಶೈಲಿಯಲ್ಲಿ ನಿರ್ಮಾಣ ಮಾಡಲಾದ ದೇವಾಲಯ ಇದಾಗಿದ್ದು, ಇದರಲ್ಲಿ ಸಂಪಿಗೆ (ಸಿದ್ದನಾಥ )ಸಿದ್ದೇಶ್ವರ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಗುಹೆಯಲ್ಲಿ ನಿರ್ಮಾಣಗೊಂಡ ಗುಹಾಲಯ ಇದಾಗಿದೆ. ಕೋಟೆಯ ವಿಶಾಲವಾದ ಹಾಗೂ ದೊಡ್ಡ ಪ್ರಾಂಗಣ ಹೊಂದಿರುವ ದೇವಾಲಯ ಇದಾಗಿದೆ.
ಕೋಟೆಯ ಕರುವರ್ತೀಶ್ವರ ದೇವಾಲಯ : ಕೋಟೆಯ ದಕ್ಷಿಣ ಭಾಗಕ್ಕೆ ಸಾಗುವ ರಸ್ತೆಯು ನೇರವಾಗಿ ಈ ದೇವಾಲಯಕ್ಕೆ ತಲುಪುತ್ತದೆ. ಇದರ ಮುಂಭಾಗದಲ್ಲಿ ಕೊಳವಿದ್ದು, ದೇವಾಲಯವು ಕಪ್ಪು ಕಲ್ಲಿನ ಸೂಕ್ಷ್ಮ ಕೆತ್ತನೆಗಳಿಂದ ನಿರ್ಮಾಣ ಮಾಡಲಾಗಿದೆ.
ಚಿತ್ರದುರ್ಗದ ಕೋಟೆಯ ಮೇಲೆ ಇರುವ ನೆಲ್ಲಿಕಾಯಿ ಸಿದ್ದಪ್ಪನ ಗುಡಿ. ಚಿತ್ರದುರ್ಗ ಕೋಟೆಯಲ್ಲಿ ಅತ್ಯಂತ ಹೆಚ್ಚು ಎತ್ತರದ ಗಿರಿ ಶಿಖರವಾದ ನೆಲ್ಲಿಕಾಯಿ ಸಿದ್ದಪ್ಪನ ಬೆಟ್ಟದ ತುದಿಯಲ್ಲಿ ಇರುವ ನೆಲ್ಲಿಕಾಯಿ ಸಿದ್ದಪ್ಪನ ಗುಡಿಯು 17ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಗರ್ಭಗುಡಿಯಲ್ಲಿ ನೆಲ್ಲಿಕಾಯಿ ಗಾತ್ರದ ಪುಟ್ಟ ಶಿವಲಿಂಗ ಇರುವ ಕಾರಣಕ್ಕೆ ಈ ದೇವರಿಗೆ ನೆಲ್ಲಿಕಾಯಿ ಸಿದ್ದಪ್ಪ ಹೆಸರು ಬಂದಿದೆ. ಇದರ ಬಳಿಯಲ್ಲಿಯೇ ಅತ್ಯಂತ ಎತ್ತರದಲ್ಲಿ ನಿರ್ಮಾಣ ಮಾಡಲಾದ ಭತೇರಿ ಇದೆ.