ಕರ್ನಾಟಕ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಹಿಂದಿನ ಬಿಜೆಪಿ (BJP) ಸರ್ಕಾರ ಎಲೆಕ್ಟ್ರಿಕ್ ಬೈಕ್, ಟ್ಯಾಕ್ಸಿಗೆ 2021ರ ಜುಲೈ 14ರಂದು ಅನುಮತಿ ನೀಡಿತ್ತು. ಆದರೆ ಇಂದಿನ ಕಾಂಗ್ರೆಸ್ (Congress) ಸರ್ಕಾರ ಹಿಂದಿನ ಸರ್ಕಾರ ನೀಡಿದ್ದ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಅನುಮತಿಯನ್ನು ವಾಪಸ್ಸು ಪಡೆದುಕೊಂಡಿದೆ.
ಬಿಎಂಆರ್ಸಿಎಲ್ (BMRCL) ಎಂಡಿ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯ ವರದಿಯಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆಯು ಮೋಟಾರ್ ವಾಹನ ಕಾಯ್ದೆಗೆ ಪೂರಕವಾಗಿಲ್ಲ ಎಂದು ತಿಳಿಸಿದೆ. ಹೀಗಾಗಿ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ವಿರುದ್ದ ಬೃಹತ್ ಹೋರಾಟ ನಡೆದಿತ್ತು. ಆಟೋ ,ಟ್ಯಾಕ್ಸಿ, ಮ್ಯಾಕ್ಸಿ,ಕ್ಯಾಬ್ ಚಾಲಕರು ಬೈಕ್ ಟ್ಯಾಕ್ಸಿ ವಿರುದ್ದ ಸಿಡಿದೆದ್ದಿದ್ದರು. ಮಹಿಳೆಯರಿಗೆ ಅಸುರಕ್ಷಿತವಾದ ಯೋಜನೆ ಅಂತಾ ಹೇಳಲಾಗಿತ್ತು. ಸದ್ಯ ಈಗ ಕಾಂಗ್ರೆಸ್ ಸರ್ಕಾರ ವಿದ್ಯುತ್ ಬೈಕ್ ಟ್ಯಾಕ್ಸಿ ಯೋಜನೆ-2021 ರದ್ದುಗೊಳಿಸಿ ಆದೇಶ ಹೊರಡಿಸಿದೆ.
2021ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ‘ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ- 2021’ ಅನ್ನು ಪ್ರಾರಂಭಿಸಿದರು. ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ಸಾರ್ವಜನಿಕರು ತಮ್ಮ ಮನೆಗಳಿಂದ ಬಸ್ ನಿಲ್ದಾಣಗಳು, ರೈಲ್ವೆ ಮತ್ತು ಮೆಟ್ರೋ ಸ್ಟೇಷನ್‌ಗಳಿಗೆ ಸುಲಭವಾಗಿ ಮತ್ತು ಕಡಿಮೆ ಸಮಯದಲ್ಲಿ ತೆರಳುವಂತೆ ಮಾಡುವುದು.
ವಿಶೇಷವಾಗಿ ಬೆಂಗಳೂರು ನಗರದಲ್ಲಿ ಪ್ರಯಾಣದ ಸಮಯ ಮತ್ತು ಅನನುಕೂಲತೆ ಕಡಿಮೆ ಮಾಡುವುದು. “ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ 2021 ಸಾರ್ವಜನಿಕ ಸಾರಿಗೆ ಮತ್ತು ದೈನಂದಿನ ಪ್ರಯಾಣಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿತ್ತು.
ಆದರೆ ಇತ್ತೀಚೆಗೆ ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ ಮಹಿಳೆಯರಿಗೆ ಅಸುರಕ್ಷಿತ ಎಂಬ ಕೂಗು ಎದ್ದಿತ್ತು. ಸರ್ಕಾರದ ಗಮನ ಸೆಳೆದಿತ್ತು. ಅಲ್ಲದೆ ಬೈಕ್ ಟ್ಯಾಕ್ಸಿ ವಿರುದ್ದ ಬೃಹತ್ ಹೋರಾಟ ನಡೆದಿತ್ತು. ಸದ್ಯ ಈಗ ಸರ್ಕಾರ ಈ ಯೋಜನೆಯನ್ನು ರದ್ದು ಮಾಡಿದೆ.