ಲೋಕಸಭೆ ಚುನಾವಣಾ 2024 ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದರೆ, ಮತ್ತೊಂದೆಡೆ ಬಿಜೆಪಿಗೆ (BJP) ಕೆಲ ಕ್ಷೇತ್ರಗಳು ಕಗ್ಗಂಟಾಗಿದ್ದು, ಅಸಮಾಧಾನ ಬೆಂಕಿಯಿಂದ ಬೇಯುತ್ತಿರೋ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಫೈನಲ್ ಮಾಡಲು ಮಹತ್ವದ ಸಭೆ ನಡೆಸಲಾಗಿದೆ.
ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳ 150 ಅಭ್ಯರ್ಥಿಗಳ ಎರಡನೇ ಪಟ್ಟಿ ಬಗ್ಗೆ ಚರ್ಚಿಸಲಾಗಿದೆ. ಅದರಲ್ಲೂ ರಾಜ್ಯದಲ್ಲಿ ಕಗ್ಗಂಟಾಗಿರುವ ಕೆಲ ಕ್ಷೇತ್ರಗಳನ್ನ ಬಿಟ್ಟು ಸಿಂಗಲ್ ಹೆಸರು ಇರುವ ಕ್ಷೇತ್ರಗಳನ್ನ ಫೈನಲ್ ಮಾಡುವ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ 18 ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಬಾಕಿ 10 ಕ್ಷೇತ್ರಗಳ ಟಕೆಟ್ ಗೊಂದಲ ಮುಂದುವರೆದಿದೆ.
ಹಲವು ಹಾಲಿ ಸಂಸದರಿಗೆ ಟಿಕೆಟ್ ಅನುಮಾನ ?ರಾಜ್ಯದ 28 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳು ಬಿಜೆಪಿ ಕಗ್ಗಂಟಾಗಿವೆ. ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಉತ್ತರ ಕನ್ನಡ ಅನಂತಕುಮಾರ್ ಹೆಗಡೆ, ಬೀದರ್ ಕ್ಷೇತ್ರದ ಭಗವಂತ್ ಖೂಬಾ, ದಾವಣಗೆರೆಯ ಸಿದ್ದೇಶ್ವರ್ಗೆ ಈ ಬಾರಿ ಲೋಕಸಭಾ ಟಿಕೆಟ್ ಸಿಗುವುದು ಅನುಮಾನ ಎಂದು ತಿಳಿದುಬಂದಿದೆ.
ಬಿಜೆಪಿಗೆ ಕಗ್ಗಂಟಾಗಿರೋ ಕ್ಷೇತ್ರಗಳಾವುವು ? 1.ಮೈಸೂರು, 2.ಉತ್ತರಕನ್ನಡ, 3.ಚಾಮರಾಜನಗರ, 4.ಬೆಂಗಳೂರು ಉತ್ತರ. 5.ಚಿಕ್ಕಬಳ್ಳಾಪುರ. 6.ಚಿಕ್ಕಮಗಳೂರು, 7.ಹಾವೇರಿ, 8.ಬೆಳಗಾವಿ, 9.ಮಂಗಳೂರು, 10.ದಾವಣಗೆರೆ ಕ್ಷೇತ್ರದ ಟಿಕೆಟ್ ಕಗ್ಗಂಟಾಗಿ ಉಳಿದೆ. ಯಾಕಂದ್ರೆ, ಈ ಕ್ಷೇತ್ರಗಳಿಗೆ ಟಿಕೆಟ್ ಆಕಾಂಕ್ಷಿಗಳು ಇಬ್ಬರು-ಮೂವರು ಇದ್ದಾರೆ. ಹೀಗಾಗಿ ಈ ಕ್ಷೇತ್ರಗಳ ಟಿಕೆಟ್ ಗೊಂದಲ ಮುಂದುವರೆದಿದೆ.
- ದಾವಣಗೆರೆಯಲ್ಲಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡದಂತೆ ಆಗ್ರಹ ಕೇಳಿ ಬಂದಿದೆ. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದ ಜಿಲ್ಲಾ ಬಿಜೆಪಿಯ ಮುಖಂಡರು ದೆಹಲಿಯಲ್ಲಿ ಠಿಕಾಣಿ ಹಾಕಿ ಲಾಬಿ ಮಾಡಿದ್ದಾರೆ.
- ತುಮಕೂರಿನಲ್ಲಿ ವಿ.ಸೋಮಣ್ಣಗೆ ಟಿಕೆಟ್ ಬಹುತೇಕ ಖಚಿತ ಎನ್ನಲಾಗಿದೆ. ಆದ್ರೆ, ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಇನ್ನೂ ರೇಸ್ನಿಂದ ಹಿಂದೆ ಸರಿದಿಲ್ಲ. ಈ ಮಧ್ಯೆ ಟಿಕೆಟ್ ಗಾಗಿ ಮಾಧುಸ್ವಾಮಿ ಬೆಂಬಲಿಗರು ಹಕ್ಕೊತ್ತಾಯ ಆರಂಭಿಸಿದ್ದಾರೆ. ಬಹಿರಂಗ ಸಭೆಗಳ ಮೂಲಕ ಹಕ್ಕೊತ್ತಾಯ ಮಾಡ್ತಿದ್ದಾರೆ. ಮಾಧುಸ್ವಾಮಿ ಬೆಂಬಲಿಗರು ಸೋಮಣ್ಣ ವಿರುದ್ಧ ಹೊರಗಿನವರು ಎಂಬ ಅಸ್ತ್ರ ಪ್ರಯೋಗ ಮಾಡುತ್ತಿದ್ದಾರೆ.
- ಸಂಸದ ಪ್ರತಾಪ್ ಸಿಂಹಗೆ ಮೈಸೂರು ಟಿಕೆಟ್ ಸಿಗುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ಪ್ರತಾಪ್ ಸಿಂಹ ಬದಲಿಗೆ ಯದುವೀರ್ ಒಡೆಯರ್ಗೆ ಟಿಕೆಟ್ ನೀಡಬೇಕೆಂ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.
- ಚಿಕ್ಕಬಳ್ಳಾಪುರ ಬಿಜೆಪಿಯಲ್ಲೂ ಟಿಕೆಟ್ ಫೈಟ್ ಜೋರಾಗಿದೆ. ಮಾಜಿ ಸಚಿವ ಡಾ.ಕೆ.ಸುಧಾಕರ್ ಹಾಗೂ ಅಲೋಕ್ ವಿಶ್ವನಾಥ್ ನಡುವೆ ಪೈಪೋಟಿ ಇದೆ. ಹೀಗಾಗಿ ಇಬ್ಬರ ಜಗಳದ ಲಾಭ ಮೂರನೇಯವ್ರ ಪಾಲಾಗುತ್ತಾ ಎನ್ನುವ ಅನುಮಾನ ಮೂಡಿದೆ.
- ಉತ್ತರ ಕನ್ನಡ ಕ್ಷೇತ್ರದ ಟಿಕೆಟ್ಗಾಗಿ ಮೂವರ ನಡುವೆ ಪೈಪೋಟೆ ನಡೆದಿದೆ. ಹರಿಪ್ರಕಾಶ್ ಕೋಣೆಮನೆ, ಹಾಲಿ ಸಂಸದ ಅನಂತ ಕುಮಾರ್ ಹೆಗಡೆ ಮತ್ತು ಕೇಗೇರಿ ತಮಗೆ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಯಾರಿಗೆ ಕೊಡಬೇಕೆನ್ನುವುದು ಹೈಕಮಾಂಡ್ಗೆ ದೊಡ್ಡ ತಲೆನೋವಾಗಿದೆ. ಈ ಮೂವರ ನಡುವೆ ಇದೀಗ ಚಕ್ರವರ್ತಿ ಸೂಲಿಬೆಲೆ ಹೆಸರು ಮುನ್ನಲೆ ಬಂದಿದೆ.
- ಇನ್ನು ಪ್ರಮುಖವಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಈ ಬಾರಿ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೂ ಸಹ ಅನುಮಾನ ಎನ್ನಲಾಗಿದೆ. ದಕ್ಷಿಣ ಕನ್ನಡಕ್ಕೆ ಬ್ರಿಜೇಶ್ ಚೌಟಾ ಮತ್ತು ಕಿಶೋರ್ ಬೊಟ್ಯಾಡಿ ಬಗ್ಗೆ ಚರ್ಚೆಗಳು ನಡೆದಿವೆ ಎಂದು ತಿಳಿದಬಂದಿದೆ.
- ಕೇಂದ್ರ ಸಚಿವ ಭಗವಂತ ಖೂಬಾಗೆ ಬೀದರ್ ಕ್ಷೇತ್ರದ ಟಿಕೆಟ್ ಅನುಮಾನ ಎನ್ನಲಾಗಿದೆ.
ಡಾ.ಮಂಜುನಾಥ್ಗೆ ಟಿಕೆಟ್ ಫಿಕ್ಸ್ ? ಇನ್ನೊಂದೆಡೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಕ್ಕೆ ಡಾಕ್ಟರ್ ಮಂಜುನಾಥ್ ಹೆಸರು ಕೇಳಿ ಬಂದಿತ್ತು. ಮಂಜುನಾಥ್ ಸ್ಪರ್ಧೆ ಮಾಡಲು ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ. ಅಲ್ಲದೇ, ಮಾಜಿ ಸಿಎಂ ಕುಮಾರಸ್ವಾಮಿ ಸಹ, ಮಂಜುನಾಥ್ ಅವರನ್ನ ಸ್ಪರ್ಧೆ ಮಾಡುವಂತೆ ಮನವೊಲಿಸಿದ್ದಾರೆ. ಈ ವಿಚಾರವನ್ನ ಕುಮಾರಸ್ವಾಮಿ ಬಿಜೆಪಿ ನಾಯಕರ ಗಮನಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.