ಚಿತ್ರದುರ್ಗ.ಮಾರ್ಚ್.10: ಪಿ.ಆರ್.ಟಿ ಎಂದೇ ಜನಮಾನಸದಲ್ಲಿ ಹೆಸರಾಗಿರುವ ಹಿರಿಯೂರು ತಾಲ್ಲೂಕು ಹರ್ತಿಕೋಟೆ ಗ್ರಾಮದ ಪಿ.ಆರ್.ತಿಪ್ಪೇಸ್ವಾಮಿ ನಿಸ್ವಾರ್ಥದಿಂದ ಸಮಾಜಮುಖಿ ಜೀವನ ನಡೆಸಿದವರು.
ಅವರ ಕೊಡುಗೆಗಳನ್ನು ನೆನಪಿಸುವ ಕೆಲಸವನ್ನು ಪಿ.ಆರ್.ಟಿ ಪ್ರತಿಷ್ಠಾನ ಮಾಡಬೇಕು. ಈ ಕಾರ್ಯಕ್ಕೆ ಒಂದು ವಾರದಲ್ಲಿಯೇ ರೂ.10 ಲಕ್ಷ ಗೌರವ ಧನ ನೀಡುವುದಾಗಿ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಭರವಸೆ ನೀಡಿದರು.
ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ, ಹಿರಿಯೂರು ತಾಲ್ಲೂಕು ಹರ್ತಿಕೋಟೆಯಲ್ಲಿ,ಭಾನುವಾರ ಆಯೋಜಿಸಿದ್ದ ಪಿ.ಆರ್. ತಿಪ್ಪೇಸ್ವಾಮಿಯವರ ನವೀಕೃತ ಸ್ಮಾರಕ ಲೋಕಾರ್ಪಣೆ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನವೀಕೃತ ಸ್ಮಾರಕ ನಿರ್ಮಾಣ ಕಾರ್ಯ ನಾಡಿಗೆ ಮಾದರಿಯಾಗಿದೆ. ಮೈಸೂರು ವಿಶ್ವ ವಿದ್ಯಾಲಯದಲ್ಲಿ ಪಿ.ಆರ್.ತಿಪ್ಪೇಸ್ವಾಮಿ ಕೆಲಸ ಮಾಡುತ್ತಿದ್ದಾಗ, ಜಿಲ್ಲೆಯ ಹಿಂದುಳಿದ ಭಾಗಗಳಿಂದ ವಿದ್ಯಾಭ್ಯಾಸ ಹರಿಸಿ ಮೈಸೂರಿಗೆ ಬರುವ ವಿದ್ಯಾರ್ಥಿಗಳಿಗೆ ಆಸರೆಯಾಗಿದ್ದರು.
ಅವರ ನಿಸ್ವಾರ್ಥವಾದ ಪ್ರೇಮ ಹಾಗೂ ಕಾಳಜಿಯಿಂದ ಬಹಳಷ್ಟು ಜನ ಉನ್ನತ ವಿದ್ಯಾಭ್ಯಾಸ ಗಳಿಸಿ ಜೀವನಮಟ್ಟ ಸುಧಾರಿಸಿಕೊಂಡಿದ್ದಾರೆ. ಕ್ರೀಯಾಶೀಲ ವ್ಯಕ್ತಿತ್ವದ ಪಿ.ಆರ್.ಟಿ ಬದುಕಿನ ಉದ್ದಕ್ಕೂ ಸಮಾಜ ಕಟ್ಟವ ಕೆಲಸ ಮಾಡಿದರು ಎಂದು ಸಚಿವ.ಡಿ.ಸುಧಾಕರ್ ಸ್ಮರಿಸಿದರು.