ಬೆಂಗಳೂರು : ಯುವಕನ ಹುಚ್ಚಾಟಕ್ಕೆ ಬೆಂಗಳೂರು ನಮ್ಮ ಮೆಟ್ರೋ ಸೇವೆ 27 ನಿಮಿಷ ಸ್ಥಗಿತಗೊಂಡ ಘಟನೆ ನಡೆದಿದೆ. ಜ್ಞಾನಭಾರತಿ ಸ್ಟೇಷನ್ನಿಂದ ಪಟ್ಟಣಗೆರೆ ಸ್ಟೇಷನ್ ನಡುವೆ ಮೆಟ್ರೋ ಹಳಿಯಲ್ಲಿ ಯುವಕ ಕಾಣಿಸಿಕೊಂಡಿದ್ದು, ಮೈಸೂರು ರಸ್ತೆ ನಿಲ್ದಾಣದಿಂದ ಚಲ್ಲಘಟ್ಟ ನಡುವಿನ ನೇರಳೆ ಮಾರ್ಗದಲ್ಲಿ ಸುಮಾರು ಅರ್ಧ ಗಂಟೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ.
ಹಳಿ ಮೇಲೆ ಯುವಕನ ಓಡಾಟವನ್ನು ಗಮನಿಸಿದ ಅಧಿಕಾರಿಗಳು ಕೂಡಲೇ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ. ಮೆಟ್ರೋ ಹಳಿಗಳ ಬಳಿ ಹೈವೊಲ್ಟೇಜ್ ವಿದ್ಯುತ್ ಇರುವುದರಿಂದ ಪವರ್ ಆಫ್ ಮಾಡಿಸಿ ಮದ್ಯಾಹ್ನ 3 ಗಂಟೆಯಿಂದ 3.27 ರವರೆಗೆ ಮೆಟ್ರೋ ಸೇವೆ ಸ್ಥಗಿತಗೊಳಿಸಲಾಗಿದೆ.
ಘಟನೆ ನಂತರ ಯುವಕನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಬಳಿಕ ಎಂದಿನಂತೆ ಮೆಟ್ರೋ ಸೇವೆ ಆರಂಭಗೊಂಡಿದೆ ಎಂದು ಟಿವಿ9ಗೆ ಬಿಎಂಆರ್ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೆಟ್ರೋ ಹಳಿಗಳ ಮೇಲೆ ವ್ಯಕ್ತಿ ಕಾಣಿಸಿಕೊಂಡಿದ್ದು ಇದೇ ಮೊದಲೇನಲ್ಲ. ವರ್ಷದ ಆರಂಭದಲ್ಲಿ ಮಹಿಳೆಯೊಬ್ಬರು ಹಳಿಗೆ ಜಿಗಿದ ಘಟನೆ ಇಂದಿರಾನಗರದ ಮೆಟ್ರೋ ನಿಲ್ದಾಣದಲ್ಲಿ ನಡೆದಿತ್ತು. ಮೆಟ್ರೋಗಾಗಿ ಕಾಯುತ್ತಿದ್ದ ಆಕೆ, ಹಳಿ ಮೇಲೆ ಬಿದ್ದ ತನ್ನ ಮೊಬೈಲ್ ತೆಗೆಯಲು ಹಳಿಗೆ ಜಿಗಿದಿದ್ದಾರೆ.
ಇದನ್ನು ಗಮನಿಸಿದ ಮೆಟ್ರೋ ಸಿಬ್ಬಂದಿ ತಕ್ಷಣವೇ ವಿದ್ಯುತ್ ಸರಬರಾಜನ್ನು ಸ್ಥಗಿತಗೊಳಿಸಿದ್ದು, ಕೂಡಲೇ ಆಕೆಯನ್ನು ಮೇಲೆಕೆ ಎಳೆದುಕೊಂಡಿದ್ದಾರೆ. ಇನ್ನು ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ ಕಾರಣ ಪರ್ಪಲ್ ಲೈನ್‌ನಲ್ಲಿ ಸುಮಾರು 15 ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತವಾಗಿತ್ತು.