ಕಲಬುರಗಿ: ಪ್ರಧಾನಿ ನರೇಂದ್ರ ಮೋದಿಯವರು ಕಲಬುರಗಿ -ಬೆಂಗಳೂರು ಸೇರಿ 10 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಸಂಚಾರಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು.
ಕಲಬುರಗಿ-ಬೆಂಗಳೂರು ಮಧ್ಯದ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್ ಮೋಡ್‍ನಲ್ಲಿ ಚಾಲನೆ ನೀಡುವ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ಕನಸು ನನಸು ಮಾಡಿದರು.
ಈ ವರ್ಚುವಲ್ ಕಾರ್ಯಕ್ರಮದ ವೇಳೆ ಕಲಬುರಗಿ ರೈಲ್ವೆ ನಿಲ್ದಾಣದಲ್ಲಿ ಕೂಡ ಅದಕ್ಕೆ ಹೊಂದಿಕೊಂಡ ಕಾರ್ಯಕ್ರಮ ನಡೆಯಿತು. ಬಹಳ ಜನ ಅಲ್ಲಿ ಸೇರಿದ್ದರು. ಹೊಸ ರೈಲು ಸಂಚಾರಕ್ಕೆ ಪ್ರಧಾನಿ ಮೋದಿಯವರು ಹಸಿರು ನಿಶಾನೆ ತೋರುತ್ತಿದ್ದಂತೆಯೇ ಜನರು ಶಿಳ್ಳೆ ಮತ್ತು ಚಪ್ಪಾಳೆ ಮೂಲಕ ಸಂತಸ ವ್ಯಕ್ತಪಡಿಸಿದರು.
ಈ ವೇಳೆ, ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್ ಮಾತನಾಡಿ, ಮೊದಲ ದಿನದ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲಿನಲ್ಲಿ ವಿಶೇಷ ಕಾಳಜಿಯೊಂದಿಗೆ ಕ್ಯಾನ್ಸರ್ ರೋಗಿಗಳಿಗೆ ಸ್ಪೆಷಲ್ ಟಿಕೆಟ್ ಮೂಲಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಹೀಗೆ ಪ್ರಯಾಣಿಸುವ ವ್ಯಕ್ತಿಗಳು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದರು.
ಅಫಜಲಪುರದಿಂದ ಶಹಾಪುರ ಗಡಿಯವರೆಗೆ 1575 ಕೋಟಿ ರೂಪಾಯಿ ವೆಚ್ಚದಲ್ಲಿ 71 ಕಿ.ಮೀ. ಭಾರತ್ ಮಾಲಾ ರಸ್ತೆ ನಿರ್ಮಾಣವಾಗುತ್ತಿದೆ. 500 ಕೋಟಿ ರೂಪಾಯಿ ವೆಚ್ಚದಲ್ಲಿ ಮನೆಮನೆಗೆ ಅಡುಗೆ ಅನಿಲ ಪೂರೈಕೆ ಪ್ರಗತಿಯಲ್ಲಿದೆ. 1500 ಕೋಟಿ ವೆಚ್ಚದಲ್ಲಿ ಜಲಜೀವನ್ ಮಿಷನ್ ಅಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಇದೇ ಫೆಬ್ರವರಿ 22ರಿಂದ ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಸೇವೆ ಆರಂಭಿಸಲಾಗಿದೆ. ಈ ವಿಮಾನ ನಿಲ್ದಾಣದಲ್ಲಿ ಎರಡು ಪೈಲೆಟ್ ತರಬೇತಿ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ.
ರಿಂಗ್ ರೋಡ್ ಸರ್ವಿಸ್ ರಸ್ತೆಗೆ ಚಾಲನೆ ನೀಡಲಾಗಿದೆ. ಕಲ್ಬುರ್ಗಿಯ ಕೋಟನೂರ್ ಬಳಿ ಕೃಷಿ ಶೀತಲೀಕರಣ ಘಟಕ ಆರಂಭಿಸಲಾಗಿದೆ. ಸನ್ನತಿ-ಕನಗನಹಳ್ಳಿ ಬೌದ್ಧ ಸ್ತೂಪ ಅಭಿವೃದ್ಧಿಗೆ ಹಣ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಸರಕಾರದ ಸಾಧನೆಗಳನ್ನು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ (ಮಾರ್ಚ್ 12) 10 ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದರು. ಇದರೊಂದಿಗೆ ವಂದೇ ಭಾರತ್ ರೈಲುಗಳ ಸಂಖ್ಯೆ 50 ಕ್ಕೆ ಏರಿದೆ. ಇವು ರಾಷ್ಟ್ರವ್ಯಾಪಿ 45 ಮಾರ್ಗಗಳಲ್ಲಿ ಸಂಚರಿಸುತ್ತವೆ.
ಹೊಸ ವಂದೇ ಭಾರತ್ ರೈಲುಗಳ ಮಾರ್ಗಗಳಿವು
ಅಹಮದಾಬಾದ್-ಮುಂಬೈ ಸೆಂಟ್ರಲ್
ಸಿಕಂದರಾಬಾದ್-ವಿಶಾಖಪಟ್ಟಣಂ
ಮೈಸೂರು- ಡಾ. ಎಂಜಿಆರ್ ಸೆಂಟ್ರಲ್ (ಚೆನ್ನೈ)
ಪಾಟ್ನಾ- ಲಕ್ನೋ
ನ್ಯೂ ಜಲ್ಪೈಗುರಿ-ಪಾಟ್ನಾ
ಪುರಿ-ವಿಶಾಖಪಟ್ಟಣಂ
ಲಕ್ನೋ – ಡೆಹ್ರಾಡೂನ್
ಕಲಬುರಗಿ – ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಬೆಂಗಳೂರು
ರಾಂಚಿ-ವಾರಣಾಸಿ
ಖಜುರಾಹೊ- ದೆಹಲಿ (ನಿಜಾಮುದ್ದೀನ್).
ಪ್ರಸ್ತುತ, ಭಾರತೀಯ ರೈಲ್ವೇಯು 41 ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ನಿರ್ವಹಿಸುತ್ತದೆ. ಬ್ರಾಡ್ ಗೇಜ್ (ಬಿಜಿ) ವಿದ್ಯುದ್ದೀಕರಿಸಿದ ನೆಟ್‌ವರ್ಕ್‌ಗಳೊಂದಿಗೆ ರಾಜ್ಯಗಳನ್ನು ಸಂಪರ್ಕಿಸುತ್ತದೆ. 24 ರಾಜ್ಯಗಳು ಮತ್ತು 256 ಜಿಲ್ಲೆಗಳನ್ನು ವ್ಯಾಪಿಸಿದೆ.