Breaking
Tue. Dec 24th, 2024

ಮಹದೇವಪುರ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದ ಫಕೀರಪ್ಪ ಹಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ರದ್ದು

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಆರೋಪ ಸಂಬಂಧ ಮಹದೇವಪುರ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದ ಫಕೀರಪ್ಪ ಹಟ್ಟಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್  ರದ್ದುಪಡಿಸಿದೆ. ಅಲ್ಲದೆ, ಫಕೀರಪ್ಪ ಹಟ್ಟಿ ವಶಕ್ಕೆ ಪಡೆಯಲು ಡಿಸಿಪಿಗೆ ಸೂಚನೆ ನೀಡಿದ ಕೋರ್ಟ್, 1 ಲಕ್ಷ ರೂಪಾಯಿ ದಂಡ ಕೂಡ ವಿಧಿಸಿದೆ.

ಮನೆ ಖಾಲಿ ಮಾಡಿಸುವ ವಿಚಾರದಲ್ಲಿ ಠಾಣೆಗೆ ತೆರಳಿದ್ದಾಗ ಮಹದೇವಪುರ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿದ್ದ ಫಕೀರಪ್ಪ ಹಟ್ಟಿ ಸಂತ್ರಸ್ತೆ ಪರಿಚಯ ಮಾಡಿಕೊಂಡಿದ್ದ. ಬಳಿಕ ವಿವಾಹವಾಗುವುದಾಗಿ ನಂಬಿಸಿ 2019 ರಿಂದ 2022 ರ ವರೆಗೆ ಆಕೆಯ ಮೇಲೆ ಫಕೀರಪ್ಪ ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಿ ಸಂತ್ರಸ್ತೆ ಠಾಣೆಗೆ ದೂರು ನೀಡಿದ್ದಳು. ಆದರೆ, ಪೊಲೀಸರು ಎಫ್ಐಆರ್ ದಾಖಲಿಸಿರಲಿಲ್ಲ. ಆಯುಕ್ತರ ಗಮನಕ್ಕೆ ತಂದರೂ ಪ್ರಯೋಜನವಾಗಿರಲಿಲ್ಲ.

ಬಳಿಕ ಸೆಷನ್ಸ್ ಕೋರ್ಟ್ಗೆ ಸಂತ್ರಸ್ತೆ ಖಾಸಗಿ ದೂರು ದಾಖಲಿಸಿದ್ದಳು. ಅದರಂತೆ ಫಕೀರಪ್ಪಗೆ ನಿರೀಕ್ಷಣಾ ಜಾಮೀನು ದೊರಕಿತ್ತು. ಆದರೆ, ಸೆಷನ್ಸ್ ಕೋರ್ಟ್ ಆರೋಪಿಗೆ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿತ್ತು. ಜಾಮೀನು ರದ್ದಾದ ವಿಚಾರವನ್ನು ಸೆಷನ್ಸ್ ಕೋರ್ಟ್ ಗಮನಕ್ಕೆ ಫಕೀರಪ್ಪ ತಂದಿರಲಿಲ್ಲ.

ಹೀಗಾಗಿ ಫಕೀರಪ್ಪ ಹಟ್ಟಿಯನ್ನು ವಶಕ್ಕೆ ಪಡೆಯಲು ಡಿಸಿಪಿಗೆ ಸೂಚನೆ ನೀಡಿದ ನ್ಯಾ. ಹೆಚ್.ಪಿ.ಸಂದೇಶ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ, ಕೋರ್ಟ್ ದಾರಿ ತಪ್ಪಿಸಿದ ಆರೋಪಿ ಫಕೀರಪ್ಪ ಹಟ್ಟಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಲ್ಲದೆ, ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ.

ನ್ಯಾಯಾಲಯಕ್ಕೆ ಯಾಮಾರಿಸಲು ಯತ್ನಿಸಿದ್ದ ಕಾನ್ಸ್ಟೇಬಲ್  :  ಪ್ರಕರಣ ಸಂಬಂಧ ಆರೋಪಿ ಫಕೀರಪ್ಪಗೆ 2022ರಲ್ಲಿ ಸೆಷನ್ ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಜಾಮೀನನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ಇದಾದ ನಂತರ ತನ್ನ ವಿರುದ್ಧದ ಪ್ರಕರಣವನ್ನು ರದ್ದು ಪಡಿಸುವಂತೆ ಕೋರಿ ಫಕೀರಪ್ಪ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದನು. ಆದರೆ, ಅರ್ಜಿಯಲ್ಲಿ ಜಾಮೀನು ರದ್ದಾದ ವಿಚಾರವನ್ನು ಪ್ರಸ್ತಾಪಿಸರಿಲಿಲ್ಲ. ಹೀಗಾಗಿ ಫಕೀರಪ್ಪ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ಸ್ಟೇ ನೀಡಿತ್ತು.

ಬಳಿಕ ಆರೋಪಿಯ ಜಾಮೀನು ರದ್ದಾಗಿದ್ದ ವಿಚಾರ ಕೋರ್ಟ್ ಗಮನಕ್ಕೆ ಬರುತ್ತಿದ್ದಂತೆ ಫಕೀರಪ್ಪ ಸೆಷನ್ ಕೋರ್ಟ್ ಮುಂದೆ ಶರಣಾಗಿ ಜಾಮೀನು ಅರ್ಜಿ ಸಲ್ಲಿಸಿದ್ದನು. ಕೋರ್ಟ್ ಮತ್ತೆ ಫಕೀರಪ್ಪಗೆ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಳು. ಇದೀಗ ಸೆಷನ್ ಕೋರ್ಟ್ ಎರಡನೇ ಬಾರಿ ನೀಡಿದ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿ ಆರೋಪಿಯನ್ನು ವಶಕ್ಕೆ ಪಡೆಯುವಂತೆ ಆದೇಶಿಸಿದೆ.

Related Post

Leave a Reply

Your email address will not be published. Required fields are marked *