ಶಿವಮೊಗ್ಗದ ಹೃದಯ ಭಾಗ ಗಾಂಧಿಬಜಾರ್. ಈ ಗಾಂಧಿಬಜಾರ್ ಮುಖ್ಯ ರಸ್ತೆ ಹೌಸ್ ಫುಲ್ ಆಗಿದ್ದು, ಎಲ್ಲಿ ನೋಡಿದರೂ ಜನ ಸಾಗರ. ಎರಡು ವರ್ಷಕ್ಕೊಮ್ಮೆ ಐದು ದಿನಗಳ ಕಾಲ ನಡೆಯುವ ದೇವಿ ಜಾತ್ರೆಗೆ ಭಕ್ತ ಸಾಗರ ಹರಿದು ಬಂದಿತ್ತು. ಭಕ್ತರು ದೇವಿ ದರ್ಶನ ಪಡೆಯಲು ಹರಸಾಹಸ ಪಡುತ್ತಿದ್ದರು.
ಎರಡು ವರ್ಷಕ್ಕೊಮ್ಮೆ ನಡೆಯುವ ಪ್ರಸಿದ್ಧ ಶಿವಮೊಗ್ಗದ ಕೋಟೆ ಮಾರಿಕಾಂಬ ಜಾತ್ರೆಯು ಇಂದಿನಿಂದ(ಮಾ.12) ಆರಂಭಗೊಂಡಿದೆ. ಎಲ್ಲ ಜಾತಿ ವರ್ಗದವರು ಸೇರಿ ಮಾರಿಕಾಂಬೆಯನ್ನು ಪೂಜಿಸುವುದು ವಿಶೇಷ. ಇಂದು ಮೊದಲ ದಿನ ತವರು ಮನೆ ಗಾಂಧಿಬಜಾರ್ದಲ್ಲಿ ದೇವಿಯ ದರ್ಶನಕ್ಕೆ ಅವಕಾಶ ಮಾಡಿದ್ದು, ದೇವಿಯ ದರ್ಶನ ಪಡೆಯಲು ಜನರು ತಡರಾತ್ರಿಯಿಂದಲೇ ಸರತಿಯಲ್ಲಿ ನಿಂತು ಕಾಯುತ್ತಿದ್ದರು.
ವಿವಿಧ ಪೂಜೆ ಕೈಂಕರ್ಯ ಬಳಿಕ ಬೆಳಗ್ಗೆ 8 ಘಂಟೆಯ ಬಳಿಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಆರಂಭಗೊಂಡಿತ್ತು. ದೇವಿ ದರ್ಶನ ಪಡೆಯಲು, ಜೊತೆಗೆ ದೇವಿಗೆ ಹರಿಕೆ ತೀರಿಸಲು ಭಕ್ತರು ದೇವಿ ಗದ್ದುಗೆ ಬಳಿ ಮುಗಿಬಿದ್ದಿದ್ದರು. ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದೇವಿ ಸನ್ನಿಧಾನದಲ್ಲಿ ಕಂಡು ಬಂದಿದ್ದರು.
ಭಕ್ತ ಭಾವದಿಂದ ದೇವಿಗೆ ಮಡಲಕ್ಕಿ (ಉಡಿ) ತುಂಬಿದರು. ಎಲ್ಲಿ ನೋಡಿದರೂ ಮಾರಿಕಾಂಬೆಯ ಘೋಷಣೆಗಳು ಭಕ್ತರಿಂದ ಮೊಳಗುತ್ತಿತ್ತು. ದೇವಿ ದರ್ಶನ ಪಡೆದು ದೇವಿಗೆ ಮಡಲಕ್ಕಿ ತುಂಬಿ, ಮಕ್ಕಳನ್ನು ದೇವಿ ಮೇಲೆ ಕುರಿಸುತ್ತಿದ್ದರು. ಹೀಗೆ ಭಕ್ತರು ವಿವಿಧ ಹರಿಕೆಗಳನ್ನು ತೀರಿಸಲು ತಡರಾತ್ರಿಯಿಂದಲೇ ಶಿವಮೊಗ್ಗ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಶಿವಮೊಗ್ಗದ ಗಾಂಧಿ ಬಜಾರ್ಕ್ಕೆ ಆಗಮಿಸಿದ್ದರು.
ಜಾತ್ರೆಯ ಮೊದಲ ದಿನ ಸಸ್ಯಹಾರಿಗಳಿಗೆ ದೇವಿಗೆ ಪೂಜೆ, ಹರಕೆ, ನೈವೇದ್ಯ ದರ್ಶನಕ್ಕೆ ವ್ಯವಸ್ಥೆ ಇರುತ್ತದೆ. ರಾತ್ರಿವರೆಗೆ ಗಾಂಧಿಬಜಾರ್ನ ತವರು ಮನೆಯಲ್ಲಿ ದೇವಿ ದರ್ಶನ ಭಕ್ತರು ಪಡೆಯುತ್ತಾರೆ. ಭಕ್ತರಿಗೆ ದರ್ಶನಕ್ಕೆ ಪೆಂಡಾಲ್, ಕುಡಿಯುವ ನೀರು, ತಂಪು ಪಾನೀಯ ವ್ಯವಸ್ಥೆ ಮಾಡಲಾಗಿತ್ತು.
ಮಲೆನಾಡಿನಲ್ಲಿ ಸುಡುಬಿಸಲಿನ ಕಾರುಬಾರು. 35 ಡಿಗ್ರಿ ತಾಪಮಾನವಿದೆ. ಇಷ್ಟೊಂದು ಬಿಸಿಲಿನ ನಡುವೆ ಭಕ್ತರು ಮಾತ್ರ ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದರು. ಗಾಂಧಿ ಬಜಾರ್ ಮಾರುಕಟ್ಟೆಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಅಂಗಡಿ ಮುಂಗಟ್ಟು ಮುಚ್ಚಿದ್ದರು. ಎಲ್ಲರೂ ದೇವಿಯ ಆಶೀರ್ವಾದ ಪಡೆಯಲು ಎಲ್ಲೆಂದರಲ್ಲಿ ಭಕ್ತರು ನುಗ್ಗುತ್ತಿದ್ದರು. ಅನೇಕ ವರ್ಷಗಳ ಬಳಿಕ ದೇವಿಯ ಸನ್ನಿಧಾನದಲ್ಲಿ ಇಷ್ಟೊಂದು ಜನಸಮೂಹ ಸೇರಿದ್ದು ಎಲ್ಲರಿಗು ಅಚ್ಚರಿ ಮೂಡಿಸಿತ್ತು.
ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹ ಪಡುತ್ತಿದ್ದರು. ಇನ್ನೂ ಗಾಂಧಿ ಬಜಾರ್ ಮುಖ್ಯಧ್ವಾರದಲ್ಲಿ ಚಾಮುಂಡೇಶ್ವರಿ ವಿಗ್ರಹವನ್ನು ಹಾಕಲಾಗಿತ್ತು. ಈ ವಿಗ್ರಹದಲ್ಲಿ ದೇವಿಯು ರಾಕ್ಷಸ ವಧೆ ಮಾಡುತ್ತಿರುವ ಸನ್ನಿವೇಶ ದೇವಿಯ ದರ್ಶನಕ್ಕೆ ಬರುವ ಎಲ್ಲ ಭಕ್ತರ ಗಮನ ಸೆಳೆದಿತ್ತು.