ಮಂಡ್ಯ: ಸುಮಲತಾ ಅಂಬರೀಶ್ ಅವರು ನಮ್ಮ ಅಕ್ಕ ಇದ್ದಂತೆ. ರಾಜಕೀಯದಲ್ಲಿ ಆಗ ಏನೋ ಆಗಿದೆ. ಈಗ ನಾವು ಸಂಘರ್ಷ ಮುಂದುವರಿಸಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ಲೋಕಸಭಾ ಚುನಾವಣೆಯ ಜೆಡಿಎಸ್ ಪೂರ್ವಭಾವಿ ಸಭೆಯಲ್ಲಿ ಅವರು, ಅವರ ಚುನಾವಣೆಯ ಬಗ್ಗೆ ಒಂದು ಮಾತು ಹೇಳುತ್ತೇನೆ. ಅಂಬರೀಶ್, ನಾವೆಲ್ಲ ಒಟ್ಟಾಗಿ, ಪ್ರೀತಿಯಿಂದ ಬೆಳೆದವರು. ನಮ್ಮ ಪಕ್ಷದಿಂದಲೇ ಅಂಬರೀಶ್ ಪಾರ್ಲಿಮೆಂಟ್ ಪ್ರವೇಶ ಮಾಡಿದ್ದರು. ನಾನು ಆಗಿದ್ದಾಗಲೇ ರಾಜ್‌ಕುಮಾರ್ ಹಾಗೂ ಅಂಬರೀಶ್ ನಿಧನರಾದರು. ರಾಜ್ ಸಮಾಧಿ ಮಾಡಿದ್ದು ನಾನೇ. ಅಂಬರೀಶ್ ಸಮಾಧಿಗೂ ಜಾಗ ಗುರುತಿಸಿ ಗೌರವ ಕೊಟ್ಟೆ. ವಿಷ್ಣುವರ್ಧನ್ ಸಮಾಧಿ ಸ್ಮಾರಕ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದರು.
ಅಂಬರೀಶ್ ನನ್ನ ಆತ್ಮೀಯ ಸ್ನೇಹಿತ. ಆತನಿಗೆ ನಮನ ಸಲ್ಲಿಸಬೇಕಾದರೆ ನನ್ನ ಕರ್ತವ್ಯ. ಅಂಬರೀಶ್ ಬಡ ಕುಟುಂಬದಿಂದ ಸಿನಿಮಾರಂಗದಲ್ಲಿ ಸಾಧನೆ ಮಾಡಿದ ನಮ್ಮ ಸಮಾಜದ ವ್ಯಕ್ತಿ. ಅಂಬರೀಶ್‌ಗೆ ಗೌರವ ನೀಡುವ ಮೂಲಕ ಮಂಡ್ಯ ಜನರಿಗೂ ಗೌರವ ನೀಡಿದ್ದೇವೆ. 2019, 2023 ರ ಚುನಾವಣೆಯಲ್ಲಿ ಮಂಡ್ಯ ಜನತೆ ನಮಗೆ ಅನ್ಯಾಯ ಮಾಡಲಿಲ್ಲ.
ಮಂಡ್ಯ ಮತದಾರ ಬಂಧುಗಳೇ ನಮ್ಮ ತಂದೆ-ತಾಯಿಯಂದಿರು. ರಾಜಕೀಯವಾಗಿ ನಮ್ಮಿಂದ ಸಣ್ಣಪುಟ್ಟ ತಪ್ಪುಗಳಾಗಿರಬಹುದು. ಈ ಜಿಲ್ಲೆಯ ಜನತೆಗೆ ಸ್ಪಷ್ಟವಾಗಿ ಮನವಿ ಮಾಡಲು ಬಯಸುತ್ತೇವೆ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ನಾವು ಸಿದ್ಧರಿದ್ದೇವೆ. ತಪ್ಪು ತಿದ್ದಲು ಈ ಚುನಾವಣೆಯಲ್ಲಿ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಮಂಡ್ಯ ಜನರ ಜೊತೆ ಮೊದಲಿನಿಂದಲೂ ನಾನು ಇದ್ದೇನೆ. 2019ರಲ್ಲಿ ಹೊಂದಾಣಿಕೆ ಎಂದು ಕುತ್ತಿಗೆ ಕೊಯ್ದರು. ಅದಕ್ಕೆ ಉತ್ತರ ಕೊಡುವ ಶಕ್ತಿ ಮಂಡ್ಯ ಜನರ ಕೈಯಲ್ಲಿದೆ. ನನ್ನ ಜನ್ಮ ಭೂಮಿ ಹಾಸನ. ರಾಜಕೀಯ ಭವಿಷ್ಯ ನೀಡಿದ್ದು ರಾಮನಗರ. ನನ್ನ ಜೀವ ಮಿಡಿಯುವುದು ಮಂಡ್ಯಕ್ಕಾಗಿ. ಸ್ವಾಭಿಮಾನ ಮಾತಿನಲ್ಲಿ ಅಲ್ಲ, ಕೆಲಸದಲ್ಲಿ ಇದೆ. ನಾಟಿ ಸ್ಟೈಲ್ ರಾಜಕೀಯ ಅಂತಾರೆ ಕೆಲವರು. ದುಡ್ಡಿನಿಂದ ರಾಜಕೀಯ ಮಾಡೋದು ಅಲ್ಲ. ಕೆಲವರಿಗೆ ಈ ಚುನಾವಣೆ ಕಲೆಕ್ಷನ್ ಮಾಡಿಕೊಳ್ಳಲು ಒಳ್ಳೆಯ ಅವಕಾಶ ಎಂದು ಕಿಡಿಕಾರಿದರು.
21 ಕ್ಕೆ ನನಗೆ ಆಪರೇಷನ್ ಇದೆ. ನನಗೆ 84 ವರ್ಷ ಆಯಸ್ಸು ಎಂದು ಜ್ಯೋತಿಷಿಗಳು ಹೇಳಿದ್ದಾರೆ. ದೇವೇಗೌಡರು ಜ್ಯೋತಿಷಿಗಳ ಮಾತು ಕೇಳಿ ಬದುಕಿದ್ದಾರೆ. ಈ ಜೀವ ಭೂಮಿಗೆ ಇಷ್ಟು ಬೇಗ ಹೋಗಲ್ಲ. ಜನರು ಸರ್ಟಿಫಿಕೇಟ್ ನೀಡಿದ ಮೇಲೆ ಈ ಜೀವ ಭೂಮಿಗೆ ಹೋಗೋದು. ಜನರ ಋಣ ತೀರಿಸಿದ ಮೇಲೆ ನಾನು ಭೂಮಿಗೆ ಹೋಗೋದು. ಅಲ್ಲಿಯವರೆಗೆ ನಾನು ಭೂಮಿಗೆ ಹೋಗಲ್ಲ. ನಾನು ರಾಜಕೀಯಕ್ಕೆ ಬರಬೇಕು ಎಂದುಕೊಂಡವನಲ್ಲ. ಸಿನಿಮಾ ಹಂಚಿಕೆದಾರನಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಆಕಸ್ಮಿಕವಾಗಿ ನಾನು ರಾಜಕೀಯಕ್ಕೆ ಬಂದಿದ್ದು ಹೇಳಿದೆ.
ಡಾ. ಮಂಜುನಾಥ್ ಅವರನ್ನು ಸ್ಪರ್ಧೆ ಮಾಡುವಂತೆ ನಾನು ಹೇಳಿಲ್ಲ. ಅವರು ಸಹ ಬಯಸಲಿಲ್ಲ. ಜನರ ಒತ್ತಾಯದ ಅವರು ರಾಜಕೀಯಕ್ಕೆ ಬಂದಿದ್ದಾರೆ. ಈಗ ಕಾಂಗ್ರೆಸ್ ಅವರು ದೇವೇಗೌಡರ ಕುಟುಂಬದ ಗುಲಾಮರಾಗೋದು ಬೇಡ ಎಂದು ಹೇಳುತ್ತಾರೆ. ನಾವು ರಾಮನಗರ ಜನರನ್ನು ಗುಲಾಮ ಮಾಡಿಕೊಂಡಿಲ್ಲ. ನಾವು ಅವರ ಸೇವಕರಾಗಿದ್ದೇವೆ. ರಾಮನಗರ ಜನರನ್ನು ಗುಲಾಮ ಕಾಣೋದು ಕಾಂಗ್ರೆಸ್‌ನವರು. ಮಾವನನ್ನೇ ಯಾಮಾರಿಸಿದ ಚತುರ ಅಳಿಯ ಅಂತಾರೆ ಆ ಮಹಾನುಭಾವ. ಪಾಪ ಡಾ.ಮಂಜುನಾಥ್ ಎಷ್ಟೋ ಜನರ ಪ್ರಾಣ ಉಳಿಸಿದ್ದಾರೆ. ಅಂತಹವರಿಗೆ ಲಘುವಾಗಿ ಇವರು ಮಾತನಾಡುತ್ತಿದ್ದಾರೆ. ಇವರು ಕಮಿಷನ್ ಪಡೆದು ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.