ಅನೇಕ ಸೆಲೆಬ್ರಿಟಿಗಳು ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಯುತ್ತಿದ್ದಾರೆ. ನಟ ಪವನ್ ಕಲ್ಯಾಣ್ ಎದುರು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಆರ್ಜಿವಿ ಅವರು ಈಗ ಏಕಾಏಕಿ ರಾಜಕೀಯಕ್ಕೆ ಪ್ರವೇಶಿಸಲು ನಿರ್ಧರಿಸಿದ್ದಾರೆ. ಅವರ ಈ ಘೋಷಣೆಯಿಂದ ಎಲ್ಲರಿಗೂ ಅಚ್ಚರಿ ಆಗಿದೆ.
ಯಾವಾಗಲೂ ವಿವಾದದಿಂದಲೇ ಸುದ್ದಿ ಆಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಅವರು ಈಗ ರಾಜಕೀಯಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇಷ್ಟು ದಿನ ಸಿನಿಮಾಗಳ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಬ್ಯುಸಿ ಆಗಿದ್ದ ಅವರು ಈಗ ಏಕಾಏಕಿ ರಾಜಕೀಯದ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಅವರು ಸ್ಪರ್ಧಿಸಲಿದ್ದಾರೆ. ಅಚ್ಚರಿ ಏನೆಂದರೆ, ನಟ ಹಾಗೂ ಜನಸೇನಾ ಪಕ್ಷದ ಮುಖಂಡ ಪವನ್ ಕಲ್ಯಾಣ್ (Pawan Kalyan) ವಿರುದ್ಧ ರಾಮ್ ಗೋಪಾಲ್ ವರ್ಮಾ ಕಣಕ್ಕೆ ಇಳಿಯಲಿದ್ದಾರೆ..!
ಜನಸೇನಾ ಪಕ್ಷದ ಮುಖಂಡ ಪವನ್ ಕಲ್ಯಾಣ್ ಅವರು ಆಂಧ್ರದ ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧಿಸುವ ಘೋಷಣೆ ಆಗಿದೆ. ಅದರ ಬೆನ್ನಲ್ಲೇ ರಾಮ್ ಗೋಪಾಲ್ ವರ್ಮಾ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ. ಕೆಲವರು ಈ ನಿರ್ಧಾರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಅಂಥವರಿಗೂ ರಾಮ್ ಗೋಪಾಲ್ ವರ್ಮಾ ಉತ್ತರ ನೀಡಿದ್ದಾರೆ. ‘ನಾನು ತುಂಬ ಗಂಭೀರವಾಗಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಪಿಠಾಪುರಂ ಕ್ಷೇತ್ರದಲ್ಲಿ ಜನಸೇನಾ ಪಕ್ಷ, ಭಾರತೀಯ ಜನತಾ ಪಕ್ಷ ಹಾಗೂ ತೆಲುಗು ದೇಶಂ ಪಕ್ಷ ಮೈತ್ರಿ ಮಾಡಿಕೊಂಡಿವೆ. ಆ ಕ್ಷೇತ್ರದಲ್ಲಿ ಜನಸೇನಾ ಪಕ್ಷದಿಂದ ಪವನ್ ಕಲ್ಯಾಣ್ ಅವರು ಸ್ಪರ್ಧಿಸಲಿದ್ದಾರೆ.
ಅದೇ ಕ್ಷೇತ್ರದಲ್ಲಿ ತಾವು ಚುನಾವಣೆಗೆ ನಿಲ್ಲವುದಾಗಿ ರಾಮ್ ಗೋಪಾಲ್ ವರ್ಮಾ ಅವರು ಘೋಷಿಸಿರುವುದು ಅಚ್ಚರಿ ಮೂಡಿಸಿದೆ. ಹಲವು ಸಂದರ್ಭಗಳಲ್ಲಿ ರಾಮ್ ಗೋಪಾಲ್ ವರ್ಮಾ ಅವರ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಹಾಗಂತ ಅವರನ್ನು ನಿರ್ಲಕ್ಷಿಸಲು ಕೂಡ ಸಾಧ್ಯವಿಲ್ಲ. ಒಟ್ಟಿನಲ್ಲಿ ಅವರ ಈ ಘೋಷಣೆಯಿಂದ ಹೊಸ ಚರ್ಚೆ ಶುರುವಾಗಿದೆ.