ವ್ಯಕ್ತಿಯೊಬ್ಬ ಬೌದ್ಧ ಮಂದಿರಕ್ಕೆ ನುಗ್ಗಿ ಅಲ್ಲಿರುವ ಅತಿ ಎತ್ತರದ ಬುದ್ಧನ ಪ್ರತಿಮೆಯನ್ನು ಏರಿ ಒಡೆಯಲು ಯತ್ನಿಸುತ್ತಿದ್ದಾಗ, ಪ್ರತಿಮೆಯ ಚೂಪಾದ ಭಾಗವೊಂದು ಆತನ ಎದೆಗೆ ಚುಚ್ಚಿಕೊಂಡಿದ್ದು, ತೀವ್ರ ರಕ್ತಸ್ರಾವ ಉಂಟಾಗಿ ಅಲ್ಲೇ ಬಿದ್ದು ಸಾವನ್ನಪ್ಪಿರುವ ಘಟನೆ ಥಾಯ್ಲೆಂಡ್‌ನಲ್ಲಿ ನಡೆದಿದೆ.
ದೇವಾಲಯದ ಒಳಗೆ ಏಕಾಏಕಿ ನುಗ್ಗಿ ವಿಧ್ವಂಸಕ ಕೃತ್ಯ ಎಸಗುತ್ತಿದ್ದಂತೆ ಅಲ್ಲಿದ್ದ ಬೌದ್ಧ ಸನ್ಯಾಸಿಗಳು ಆತನನ್ನು ತಡೆಯಲು ಪ್ರಯತ್ನಿಸಿದ್ದರು, ಆದರೆ ಬೌದ್ಧ ಸನ್ಯಾಸಿಗಳ ಮೇಲೂ ಹಲ್ಲೆ ನಡೆಸಿ ದೇವರ ವಿಗ್ರಹವನ್ನು ಕೆಡವಲು ಮುಂದಾದ ವೇಳೆ ಏಕಾಏಕಿ ನೆಲದ ಮೇಲೆ ಬಿದ್ದು ಅಲ್ಲೇ ಸಾವನ್ನಪ್ಪಿದ್ದಾನೆ. ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಾಕಷ್ಟು ನೆಟ್ಟಿಗರು ಇದು ‘ಕರ್ಮದ ಫಲ’ ಎಂದು ಕಾಮೆಂಟ್ ಮಾಡಿದ್ದಾರೆ.
49 ವರ್ಷದ ಥಾಯ್ ಎಂಬ ವ್ಯಕ್ತಿ ದೇವಾಲಯದ ಮುಖ್ಯ ಸಭಾಂಗಣವನ್ನು ಧ್ವಂಸಗೊಳಿಸುತ್ತಿದ್ದಾಗ, ಬುದ್ಧನ ಪ್ರತಿಮೆಯ ತೀಕ್ಷ್ಣವಾದ ಭಾಗವೊಂದು ಅವನ ತಲೆ ಮತ್ತು ಎದೆಗೆ ಚುಚ್ಚಿದೆ. ಇದರಿಂದಾಗಿ ತೀವ್ರ ರಕ್ತಸ್ರಾವವಾಗಿ ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಫೆಬ್ರವರಿ 27ರಂದು ಈ ಘಟನೆ ನಡೆದಿದ್ದು, ಗಲಭೆ ವೇಳೆ ಸಂಭವಿಸಿದ ಈ ವಿಚಿತ್ರ ಸಾವು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಲ್ಲಿದೆ.
ವರದಿಯ ಪ್ರಕಾರ, ಪೊಲೀಸರು ದೇವಸ್ಥಾನದ ಒಳಗೆ ಹೋಗಿ ನೋಡಿದಾಗ ರಕ್ತದಲ್ಲಿ ಮಡುವಿನಲ್ಲಿ ವ್ಯಕ್ತಿಯ ಶವ ಕಂಡು ಬೆಚ್ಚಿಬಿದ್ದಿದ್ದರು. ಆತ ಅತಿ ಎತ್ತರದ ಬುದ್ಧನ ಪ್ರತಿಮೆಯನ್ನು ಏರಿ ಒಡೆಯಲು ಯತ್ನಿಸುತ್ತಿದ್ದಾಗ, ಪ್ರತಿಮೆಯ ಚೂಪಾದ ಭಾಗವೊಂದು ಆತನ ಎದೆಗೆ ಚುಚ್ಚಿಕೊಂಡಿದ್ದು, ತೀವ್ರ ರಕ್ತಸ್ರಾವ ಉಂಟಾಗಿ ಅಲ್ಲೇ ಬಿದ್ದು ಸಾವನ್ನಪ್ಪಿರುವುದು ತನಿಖೆಯಿಂದ ತಿಳಿದುಬಂದಿದೆ.