ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಸಂಗೀತ ಶೋ ಸರಿಗಮಪ ಗ್ರ್ಯಾಂಡ್ ಫಿನಾಲೆ ನಿನ್ನೆ ನಡೆಯಿತು. ಈ ಬಾರಿಯ ಫಿನಾಲೆ ಟ್ರೋಫಿಯನ್ನು ದರ್ಶನ್ ನಾರಾಯಣ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಮೊದಲ ರನ್ನರ್ ಅಪ್ ಆಗಿ ರಮೇಶ್ ಲಮಾಣಿ ಹಾಗೂ ಎರಡನೇ ರನ್ನರ್ ಅಪ್ ಆಗಿ ಶ್ರಾವ್ಯ ಪ್ರಶಸ್ತಿ ಪಡೆದಿದ್ದಾರೆ.
ದರ್ಶನ್, ರಮೇಶ್ ಲಮಾಣಿ ಹಾಗೂ ಶ್ರಾವ್ಯ ನಡುವೆ ತೀವ್ರ ಪೈಪೋಟಿ ಇತ್ತು. ಕಠಿಣ ಹಾಡುಗಳನ್ನೇ ಈ ಮೂವರು ಆರಿಸಿಕೊಂಡು ವೇದಿಕೆಗೆ ಏರಿದ್ದರು. ಆದರೆ, ಕೊನೆಗೆ ಫಿನಾಲೆ ಟ್ರೋಫಿ ದರ್ಶನ್ ಪಾಲಾಯಿತು. ರಮೇಶ್ ಮತ್ತು ದರ್ಶನ್ ಪಕ್ಕದಲ್ಲಿ ನಿಲ್ಲಿಸಿಕೊಂಡಿದ್ದ ಹಂಸಲೇಖ ಯಾರ ಕೈ ಎತ್ತುವ ಮೂಲಕ ಘೋಷಣೆ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದೇ ಇದೆ. ಕೊನೆಗೂ ದರ್ಶನ್ ಕೈ ಎತ್ತಿದರು ಹಂಸಲೇಖ.
ಅಂದುಕೊಂಡಂತೆ ಆಗಿದ್ದರೆ, ಈ ಗ್ರ್ಯಾಂಡ್ ಫಿನಾಲೆಯು ಯಾದಗಿರಿಯಲ್ಲಿ (Yadagiri) ನಡೆಯಬೇಕಿತ್ತು. (Saregamappa) ಕಾರ್ಯಕ್ರಮ ಶುರುವಾಗುವ ಅರ್ಧ ಗಂಟೆ ಮುಂಚೆಯೇ ರದ್ದಾಗಿತ್ತು. ಸಂಜೆ 6 ಗಂಟೆಗೆ ಫಿನಾಲೆ ಶೋ ನಡೆಯಬೇಕಿತ್ತು. ಅದಕ್ಕೂ ಅರ್ಧಗಂಟೆ ಮುಂಚೆ ವೇದಿಕೆಗೆ ಬಂದ ವಾಹಿನಿಯ ಪ್ರತಿನಿಧಿ, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮವು ರದ್ದಾದ (Canceled) ಬಗ್ಗೆ ಮಾಹಿತಿ ನೀಡಿ, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.
ಈ ಘಟನೆ ನಡೆದ ಒಂದೇ ವಾರಕ್ಕೆ ಬೆಂಗಳೂರಿನಲ್ಲೇ ಅದ್ಧೂರಿಯಾಗಿ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವನ್ನು ನಡೆಸಿದೆ ಜೀ ಕನ್ನಡ ವಾಹಿನಿ. ಆ ಕಾರ್ಯಕ್ರಮದ ಮೂಲಕ ಮತ್ತೆ ಜೀ ಕುಟುಂಬಕ್ಕೆ ಗಾಯಕ ರಾಜೇಶ್ ಕೃಷ್ಣನ್ ವಾಪಸ್ಸಾಗಿದ್ದಾರೆ.