ಬೆಂಗಳೂರು, ಮಾರ್ಚ್ 18. : ಕರುವಿನ ಮೇಲೆ ಕಾರು ಹರಿಸಿ ಚಾಲಕ ಪರಾರಿಯಾಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಕರುವಿನ ಹೊಟ್ಟೆ, ಕಾಲಿಗೆ ಗಂಭೀರ ಗಾಯವಾಗಿದೆ. ಕಳೆದ ವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಚಾಲಕನ ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೆಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ಮಲಗುವ ಮನುಷ್ಯರಿಗೆ ರಕ್ಷಣೆ ಇಲ್ಲ. ಇನ್ನು ಪ್ರಾಣಿಗಳ ಪರಿಸ್ಥಿತಿ ಹೇಳ ತೀರದಾಗಿದೆ. ಕೆಲವು ವಾಹನ ಚಾಲಕರ ಅಜಾಗರೂಕ ಚಾಲನೆಯಿಂದ ರಸ್ತೆ ಬದಿಯಲ್ಲಿ ಮಲಗುವ ಬೀದಿ ನಾಯಿಗಳು, ಹಸರುಗಳು, ಕರುಗಳು ಗಾಯಗೊಳ್ಳುವ ಪ್ರಕರಣಗಳು ಹೆಚ್ಚುತ್ತಿದೆ.
ಈ ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಾಲಕ್ಷ್ಮೀ ಲೇಔಟ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ಕೆಂಪು ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಕರುವಿನ ಮೇಲೆ ಕಾರು ಹರಿಸಿದ್ದಾನೆ. ಅಲ್ಲದೇ ಒಂದಿಷ್ಟು ದೂರ ಚಕ್ರದ ಕೆಳಗೆ ಸಿಲುಕಿದ್ದ ಕರುವನ್ನು ಎಳೆದೊಯ್ದಿದ್ದಾನೆ. ಬಳಿಕ ಕಾರು ಚಕ್ರದಿಂದ ಕರು ಬೇರ್ಪಟ್ಟ ಬಳಿಕ, ಸೌಜನ್ಯಕ್ಕೂ ಕಾರು ನಿಲ್ಲಿಸಿ ನೋಡದೇ, ಅಲ್ಲಿಂದ ಪರಾರಿಯಾಗಿದ್ದಾನೆ.
ಈ ದೃಶ್ಯ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಕರುವಿನ ಹೊಟ್ಟೆ, ಕಾಲಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಈ ದೃಶ್ಯ ನೋಡಿ ಪ್ರತಿಯೊಬ್ಬರು ಕೂಡ ಕಾರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.