ಶಿವಮೊಗ್ಗ : ನಾನು ಹಿಂದೂ ಧರ್ಮದ ಶಕ್ತಿಯ ಉಪಾಸಕ. ಹಿಂದೂ ಶಕ್ತಿ ಮುಗಿಸಲು ಕೆಲವರು ಹುನ್ನಾರ ಮಾಡುತ್ತಿದ್ದಾರೆ. ಕರ್ನಾಟಕ ಅಂದ್ರೆ ಮಂತ್ರ ಕಣಾ, ಶಕ್ತಿ ಕಣಾ, ತಾಯಿ ಕಣಾ, ದೇವಿ ಕಣಾ ಎಂದು ಕುವೆಂಪು ಕಾವ್ಯದ ಸಾಲುಗಳನ್ನು ಉಲ್ಲೇಖಿಸಿ ಕೈ ನಾಯಕ ರಾಹುಲ್ ಗಾಂಧಿ ವಿರುದ್ಧ ಪ್ರದಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಶಿವಮೊಗ್ಗ ಸಮಾವೇಶದಲ್ಲಿ ಸಿಗಂದೂರು ಚೌಡೇಶ್ವರಿ ದೇವಿಯನ್ನು ಸ್ಮರಿಸುತ್ತಾ ಮಾತು ಆರಂಭಿಸಿದ ಮೋದಿ, ಮೊದಲು ಬಿ.ಎಸ್ ಯಡಿಯೂರಪ್ಪ ಅವರನ್ನು ಗುಣಗಾನ ಮಾಡಿದರು. ಮತ್ತೆ 400 ಸೀಟು ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಜೂನ್ 4 ರಂದು ಎನ್.ಡಿ.ಎ ಒಕ್ಕೂಟ 400ರ ಗಡಿ ದಾಟಲಿದೆ ಎಂದು ಹೇಳಿದರು.
ಅಭಿವೃದ್ಧಿಶೀಲ ಭಾರತಕ್ಕಾಗಿ ನರೇಂದ್ರ ಮೋದಿಗೆ ಮತ ನೀಡಿ. ಭ್ರಷ್ಟಾಚಾರ ನಿರ್ಮೂಲನೆಗಾಗಿ ನಮಗೆ 400 ಸೀಟು ಕೊಡಿ. ನನ್ನ ದೇಹದ ಕಣ – ಕಣವೂ ಜನಸೇವೆಗೆ ಮೀಸಲು. ನಾನು ಹಿಂದೂ ಧರ್ಮದ ಶಕ್ತಿಯ ಉಪಾಸಕ. ಹಿಂದೂ ಶಕ್ತಿ ಮುಗಿಸಲು ಕೆಲವರು ಹುನ್ನಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ದೇಶಕ್ಕೆ ಮಹಿಳಯರೇ ಶಕ್ತಿ : ಕೆಲವರು ಹಿಂದೂ ಸಮಾಜದ ವಿರುದ್ಧ ಇದ್ದಾರೆ. ಕರ್ನಾಟಕದಲ್ಲಿ ಬಿಜೆಪಿ-ಎನ್ ಡಿಎ ಬೆಂಬಲಿಸಬೇಕು. ಹಿಂದೂ ಶಕ್ತಿಯನ್ನು ಮುಗಿಸಬೇಕು ಎಂದುಕೊಂಡಿದ್ದಾರೆ. ಹಿಂದೂ ಸಮಾಜದಲ್ಲಿ ಶಕ್ತಿ ಇದೆ ಅದನ್ನು ಮುಗಿಸಲು ಸಾಧ್ಯವಿಲ್ಲ. ಹಿಂದೂ ಸಮಾಜದಲ್ಲಿ ಶಕ್ತಿ ದೇವತೆ ಪೂಜಿಸುತ್ತೇವೆ. ನಾರಿ ಶಕ್ತಿ ಬಹುದೊಡ್ಡ ಶಕ್ತಿಯಾಗಿದೆ. ಅದೇ ನನ್ನ ರಕ್ಷಣೆಯಾಗಿದೆ.
ನಮ್ಮ ಸರ್ಕಾರದಲ್ಲಿ ನಾರಿಶಕ್ತಿಗೆ ಹೆಚ್ಚಿನ ಪ್ರಾತಿನಿಧ್ಯ ಇದೆ. ನಮ್ಮ ಆದ್ಯತೆಯ ಫಲವಾಗಿ ಇಂದು ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಬೇರೆ ಯಾವ ಸರ್ಕಾರದಲ್ಲಿಯೂ ಇಷ್ಟೊಂದು ಮಹತ್ವ ಇರಲಿಲ್ಲ. ದೇಶಕ್ಕೆ ಮಹಿಳಯರೇ ಶಕ್ತಿ. ಮಹಿಳೆಯರಿಂದಲೇ ಭಾರತ ವಿಕಸಿತ. ಭಾರತ ಮಾತೆಯ ಶಕ್ತಿ ಕಣ್ಣು ಕುಕ್ಕುತ್ತಿದೆ. ನನಗೆ ನಾರಿ ಶಕ್ತಿ, ಅಮ್ಮನ ಆಶೀರ್ವಾದ ಇದೆ ಎಂದು ಮೋದಿ ಹೇಳಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ : ಕಾಂಗ್ರೆಸ್ ಸರ್ಕಾರ ಬರೀ ಸುಳ್ಳು ಹೇಳುವುದರಲ್ಲಿಯೇ ನಿರತವಾಗಿದೆ. ಪ್ರತೀ ಚುನಾವಣೆಯಲ್ಲಿಯೂ ಸುಳ್ಳುಗಳನ್ನು ಹೇಳುವುದೇ ಕಾಂಗ್ರೆಸ್ ಕೆಲಸವಾಗಿದೆ. ಮಾತು ಮಾತಿಗೂ ಸುಳ್ಳು ಹೇಳುವುದೇ ಅವರ ಅಜೆಂಡಾ ಆಗಿದೆ. ತನ್ನ ವೈಫಲ್ಯಗಳನ್ನು ಮುಚ್ಚಲು ಕಾಂಗ್ರೆಸ್ ಸುಳ್ಳು ಹೇಳುತ್ತಲೇ ಬರುತ್ತಿದೆ.
ಅವರಲ್ಲಿ ವಿಕಾಸದ ಅಜೆಂಡಾ ಇಲ್ಲ. ಒಂದು ಸುಳ್ಳು ಮರೆಮಾಚಲು ಮತ್ತೊಂದು ಸುಳ್ಳನ್ನು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಕಿಡಿಕಾರಿದರು. ಕರ್ನಾಟಕ ಒಂದು ರೀತಿ ಎಟಿಎಂನಂತೆ ಆಗಿ ಹೋಗಿದೆ. ಕರ್ನಾಟಕವನ್ನೇ ಲೂಟಿ ಹೊಡೆಯುತ್ತಿದ್ದಾರೆ. ದೆಹಲಿಯಲ್ಲಿ ಕಲೆಕ್ಷನ್ ಮಿನಿಸ್ಟರ್ ಇದ್ದಾರೆ. ಕಾಂಗ್ರೆಸ್ ಬಳಿ ಅಭಿವೃದ್ಧಿಗೆ ದುಡ್ಡಿಲ್ಲ. ಕೇಂದ್ರ ಸರ್ಕಾರ ದುಡ್ಡು ಕೊಡುತ್ತಿಲ್ಲ ಎಂದು ದಿಕ್ಕು ತಪ್ಪಿಸುತ್ತಿದ್ದಾರೆ. ಕಾಂಗ್ರೆಸ್‌ಗೆ ನನ್ನ ವಿರುದ್ಧ ಆರೋಪಗಳನ್ನು ಮಾಡುವುದೇ ಕಾಯಕವಾಗಿದೆ ಎಂದರು.
ಡಿಕೆ ಸುರೇಶ್ ವಿರುದ್ಧ ವಾಗ್ದಾಳಿ : ಇದೇ ವೇಳೆ ಸಂಸದ ಡಿಕೆ ಸುರೇಶ್ (DK Suresh) ವಿರುದ್ಧವೂ ಗರಂ ಆದ ಮೋದಿ, ದೇಶ ವಿಭಜನೆ ಬಗ್ಗೆ ಸಂಸದರೊಬ್ಬರು ಹೇಳಿಕೆ ಕೊಟ್ಟಿದ್ದಾರೆ. ಇಂತಹ ಸಂಸದರನ್ನು ಸೋಲಿಸಿ ನೀವು ಪಾಠ ಕಲಿಸಬೇಕು. ಕಾಂಗ್ರೆಸ್‌ಗೆ ಅವರಿಗೆ ದೇಶ ಪಡೆದು ಗೊತ್ತಿದೆ, ಆದರೆ ದೇಶ ಒಗ್ಗೂಡಿಸಿ ಗೊತ್ತಿಲ್ಲ. ಕಾಂಗ್ರೆಸ್ ಒಡೆದಾಳುವ ನೀತಿ ಅನುಸರಿಸುತ್ತಿದೆ.
ದೇಶ ವಿಭಜನೆಯ ಬಗ್ಗೆ ಮಾತಾಡುವವರಿಗೆ ನೀವು ಬುದ್ಧಿ ಕಲಿಸಬೇಕು. ಕಾಂಗ್ರೆಸ್ ಅನ್ನು ನಿರ್ಮೂಲನೆ ಮಾಡಿ. ಇದಕ್ಕಾಗಿ ಬಿಜೆಪಿಗೆ ಮತ ನೀಡಿ ಎಂದು ಮೋದಿ ಮನವಿ ಮಾಡಿಕೊಂಡರು. ಅಲ್ಲದೇ ನೀವು ಈ ಕೆಲಸ ಮಾಡುತ್ತೀರಿ ಎಂಬ ನಂಬಿಕೆ ನನಗಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಸುಮಾರು 25 ನಿಮಿಷಗಳ ಕಾಲ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಮೋದಿಯವರು ಬಳಿಕ ಶಿವಮೊಗ್ಗದಿಂದ ತಮಿಳುನಾಡಿನತ್ತ ತೆರಳಿದರು.