ಇಂದು ಜಗತ್ತು ಯಾಂತ್ರಿಕವಾಗಿ ಪರಿವರ್ತನೆಗಳ್ಳುತ್ತಿದ್ದು, ಹೆಚ್ಚು ಹೆಚ್ಚು ಪ್ರಗತಿಯಾದಂತೆ ಮನುಷ್ಯ ಭಾವನಾತ್ಮಕವಾಗಿ ದುರ್ಬಲನಾಗುತ್ತಿದ್ದಾನೆ.ಆಧುನಿಕ ಜೀವನ ಶೈಲಿ ಮತ್ತು ವೃತ್ತಿ ಜೀವನ ಬಹುಪಾಲು ಜನರಿಗೆ ಒತ್ತಡದಿಂದ ಬಳಸುವಂತೆ ಮಾಡಿದೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿರುವ ವ್ಯಕ್ತಿಗಳು ಕುಟುಂಬ ಮತ್ತು ಸಾಮಾಜಿಕ ಜೀವನದ ನಿರ್ವಹಣೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಅಂತಹ ಸಂಕಷ್ಟದಲ್ಲಿರುವವರಿಗೆ, ನೊಂದ, ಭಾವನಾತ್ಮಕವಾಗಿ ಸಮಸ್ಯೆಗೆ ಸಿಲುಕಿದವರಿಗೆ ಸಮಾಜ ಕಾರ್ಯ ಮತ್ತು ಆಪ್ತ ಸಮಾಲೋಚನೆಯಂತಹ ತಂತ್ರ ಕೌಶಲ್ಯಗಳು ಸಮಸ್ಯೆಯಿಂದ ಹೊರಬರಲು ಬಹು ಮುಖ್ಯವಾಗಿವೆ. ಬದುಕಿನಲ್ಲಿ ದಿಡೀರಣೆ ಎದುರುಗೊಳ್ಳುವ ಸಮಸ್ಯೆಗಳನ್ನು ಬಗೆಹರಿಸಲು ಸಮಾಜದ ಮಾದರಿಗಳು, ವಿಧಾನಗಳು ಮತ್ತು ಸಮಾಜ ಕಾರ್ಯವನ್ನು ನಿರ್ವಹಿಸುತ್ತಿರುವ ವಿವಿಧ ಸಂಘ ಸಂಸ್ಥೆಗಳ ಸೇವೆಗಳು ಮಹಾನ್ ಪಾತ್ರವನ್ನು ವಹಿಸಿರುವುದು ಸಹಜವಾಗಿ ವಾಸ್ತವಿಕ ಜಗತ್ತಿನಲ್ಲಿ ಸಾಕಷ್ಟು ಉದಾಹರಣೆಗಳಿಂದ ಗೋಚರಿಸುತ್ತದೆ.
ಮಾರ್ಚ್ 19 ರಂದು ವಿಶ್ವ ಸಮಾಜ ಕಾರ್ಯ ದಿನವನ್ನು ಆಚರಿಸುತ್ತಿದ್ದು, ಬುಯೆನ್ ವಿವಿರ್: ಪರಿವರ್ತನಾತ್ಮಕ ಬದಲಾವಣೆಗಾಗಿ ಹಂಚಿಕೆಯ ಭವಿಷ್ಯವನ್ನು ಹೊಂದಿದ ಸುಸ್ಥಿರ ಸಮುದಾಯಕ್ಕೋಸ್ಕರ ಸಮಾಜ ಕಾರ್ಯದ ವಿಧಾನಗಳು ಎನ್ನುವ ಥೀಮ್ ಹೊಂದಿದ್ದು, ಸಮಾಜ ಕಾರ್ಯದ ಆಚರಣೆಯಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆಯನ್ನು ಸೂಚಿಸುತ್ತದೆ. ಸಮಾಜ ಕಾರ್ಯ ದಿನದ ಆಚರಣೆಯು ಬಹುಮುಖ್ಯವಾದ ಪ್ರಾಮುಖ್ಯತೆಯನ್ನು ಹೊಂದಿದ್ದು, ಸಮಾಜದ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ನೆನೆಯುವ ಮೂಲಕ ಸಮಾಜ ಕಾರ್ಯಕರ್ತರ ಪಾತ್ರವನ್ನು ಪುನಃ ನಿರೂಪಿಸಿ ಸಮುದಾಯಗಳಲ್ಲಿ ಸಕಾರಾತ್ಮಕ ಪರಿವರ್ತನೆಗಳನ್ನು ತರಲು ಅವರ ಕಾರ್ಯಗಳು ಹೇಗೆ ಸಹಾಯಕವಾಗಿವೆ ಎಂಬುದನ್ನು ಖಚಿತಪಡಿಸಲು ಮತ್ತು ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಲು ಆಚರಿಸಲಾಗುತ್ತದೆ.
ಸಮಾಜ ಕಾರ್ಯ ವೃತ್ತಿಯು ಸಮಾಜದಲ್ಲಿ ಬಿಕ್ಕಟ್ಟುಗಳನ್ನು ಪರಿಹಿಸುವ ಮುಖೇನ ತೊಂದರೆಗೆ ಒಳಗಾದ, ದುರ್ಬಲ ವ್ಯಕ್ತಿ ಅಥವಾ ಗುಂಪುಗಳಿಗೆ ಮೂಲಭೂತವಾದ ಅಗತ್ಯ ಸೇವೆಗಳನ್ನು ಒದಗಿಸಿ ಅವರ ಯೋಗಕ್ಷೇಮದ ಜೊತೆಗೆ ಅಭಿವೃದ್ಧಿಗೆ ಶ್ರಮಿಸುವ ಒಂದು ವಿಭಿನ್ನ ವೃತ್ತಿ. ಸಮಾಜ ಕಾರ್ಯ ಪ್ರಶಿಕ್ಷಣಾರ್ತಿಗಳಿಗೆ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಜ್ಞಾನವನ್ನು ಏಕಕಾಲಕ್ಕೆ ನೀಡುವ ಮಾದರಿಯನ್ನು ಒಳಗೊಂಡಿರುವುದರಿಂದ ಇತರ ಪದವಿಗಳಿಗಿಂತ ಸಮಾಜ ಕಾರ್ಯ ವಿಶಿಷ್ಟ ಎನಿಸಿಕೊಂಡಿದೆ. ಸ್ಪರ್ಧಾತ್ಮಕವಾದ ಈ ಕಾಲಘಟ್ಟದಲ್ಲಿ ಎಷ್ಟೇ ಉತ್ತಮ ಶಿಕ್ಷಣ ಪಡೆದರೂ ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟಕರ. ಆ ದೃಷ್ಟಿಯಲ್ಲಿ ಈಗೀಗ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸುಗಳತ್ತ ಒಲವು ತೋರಿಸುತ್ತಿರುವುದು ಅದಕ್ಕೆ ಸಾಕ್ಷಿ. ಶ್ರೀಮಂತರ ಮಕ್ಕಳು ಲಕ್ಷ ಲಕ್ಷ ಹಣ ವ್ಯಯ ಮಾಡಿ ಡಾಕ್ಟರ್ ಇಂಜಿನಿಯರಿಂಗ್ ನಂತಹ ಪದವಿ ಪಡೆಯುತ್ತಿದ್ದಾರೆ. ಆದರೆ ಬಡವರ ಮಕ್ಕಳಿಗೆ ಅದು ಕಷ್ಟಸಾಧ್ಯ ಹಾಗಾಗಿ ಅವರಿಗೆ ಆರ್ಥಿಕವಾಗಿ ಹೊರೆಯಾಗದೇ ಕೈಗೆಟುಕುವ ಪದವಿಯನ್ನು ಪಡೆಯುವುದಕ್ಕೆ ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಅಂದಾಜು ಮಾಡಲಾಗಿದೆ. ಅಂತಹ ವೃತ್ತಿಪರ ಪದವಿಗಳಲ್ಲಿ ಸಮಾಜ ಕಾರ್ಯ ಒಂದಾಗಿದ್ದು, ಸಮಾಜದಲ್ಲಿ ಸಮಸ್ಯೆಗಳಿಗೆ ಪರಿಹಾರ ನೀಡುವ ಮುಖ್ಯ ಮಾಧ್ಯಮವಾಗಿದೆ. ವ್ಯಕ್ತಿಯ ವೈಯಕ್ತಿಕ, ವೃಂದದ ಮತ್ತು ಸಮುದಾಯಿಕ ಮಟ್ಟದಲ್ಲಿ ಪರಿವರ್ತನೆಗಳನ್ನು ತರಲು ವಿವಿಧ ಪ್ರಯೋಗಗಳಿಗೆ ಒಳಗಾಗಿದ್ದು, ಸಮಾಜದ ಕ್ಷೇಮವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಜೊತೆಗೆ ಸಂಕಷ್ಟದಲ್ಲಿರುವ ವ್ಯಕ್ತಿಗಳ ಶಕ್ತಿಯನ್ನು ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಿ ಸಮಸ್ಯೆ ಪರಿಹರಿಸಲು ಮುಖೇನ ಸಮಾಜದಲ್ಲಿನ ಬಡವರು ಮತ್ತು ದುರ್ಬಲ ವರ್ಗದ ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ.
ಸಮಾಜ ಕಾರ್ಯ ಎಂದರೆ ಪುಕ್ಕಟೆ ದುಡಿಯುವುದು, ಕೈಯಲ್ಲಿ ಪೊರಕೆ ಹಿಡಿದು ಕಸಗೂಡಿಸುವುದು ಮತ್ತು ಉದ್ಯೋಗ ಅವಕಾಶಗಳಿಲ್ಲ ಎಂದು ಬಹಳಷ್ಟು ಜನರು ತಪ್ಪಾಗಿ ವ್ಯಾಖ್ಯಾನಿಸಿಕೊಂಡಿದ್ದಾರೆ. ಅದು ತಪ್ಪು ಸಮಾಜ ಕಾರ್ಯ ಪದವಿದರರು ಈಗಾಗಲೇ ಬಹುತೇಕ ವಲಯದಲ್ಲಿ ಸಮಾಜ ಕಾರ್ಯ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ನಿಸ್ವಾರ್ಥ ಸೇವೆ ಮಾಡುವವರಿಗೆ ಒಂದು ವೇದಿಕೆಯಾದರೆ ಜೀವನ ನಿರ್ವಹಣೆಗೆ ಸಾಕಷ್ಟು ಉದ್ಯೋಗ ಅವಕಾಶವನ್ನು ಹೊಂದಿದೆ. ಅವರವರ ಜ್ಞಾನ ಮತ್ತು ಕೌಶಲ್ಯಗಳ ಆಧಾರದ ಮೇಲೆ ವೇತನ ಪಡೆಯಲು ಸಾಧ್ಯ ಎನ್ನುವ ಮಾತನ್ನು ಸಹ ಅಲ್ಲಗಳೆಯುವಂತಿಲ್ಲ. ಈ ನಾಡಿನ ಬಹುಪಾಲು ವಿಶ್ವ ವಿದ್ಯಾಲಯಗಳಲ್ಲಿ ಸಮಾಜ ಕಾರ್ಯ ಶಿಕ್ಷಣ ದೊರೆಯುತ್ತಿರುವುದು ಪ್ರಸ್ತುತ ಆ ಪದವಿ ಇರುವ ಮಾನ್ಯತೆಯನ್ನು ತೋರಿಸುತ್ತದೆ. ಸಮಾಜ ಕಾರ್ಯ ವೃತ್ತಿಯು ಸಮಾಜದ ಸಂಕೀರ್ಣ ಸಮಸ್ಯೆಗಳ ವಿವಿಧ ಆಯಾಮಗಳನ್ನು ಅರ್ಥೈಸಿಕೊಳ್ಳಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ವಿವಿಧ ಪ್ರಾಯೋಗಿಕ ಜ್ಞಾನವನ್ನು ಬಳಸುವ ಅನಿವಾರ್ಯತೆ ಇದೆ. ಈ ವೃತ್ತಿಯಲ್ಲಿ ಯಶಸ್ವಿಯಾಗಲು ಮತ್ತು ಈಗಾಗಲೇ ವೃತ್ತಿಯಲ್ಲಿ ತೊಡಗಿಕೊಂಡವರು ಬರೀ ವೇತನಕ್ಕೆ ದುಡಿಯುವ ಯಂತ್ರಗಳಾಗದೇ ಪ್ರಮಾಣಿಕತೆ, ಆತ್ಮ-ಪ್ರಜ್ಞೆ, ಕಾರ್ಯನಿಷ್ಠೆ, ಮತ್ತು ಸಮಸ್ಯೆಗೆ ಪ್ರತಿ ಸ್ಪಂದಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ಮುಖ್ಯ. ಸಮಾಜ ಕಾರ್ಯಕ್ಕೆ ಸಂಬಂಧಿಸಿದ ಅವಕಾಶಗಳ ಹೆಚ್ಚಳ ಮಾಡುವ ಮೂಲಕ ವೃತ್ತಿಯನ್ನು ಬಲಪಡಿಸುವ ಪ್ರಯತ್ನಗಳು ನಡೆಯಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.
ಹುಸೇನಸಾಬ ವಣಗೇರಿ,ಸಂಶೋಧನಾ ವಿದ್ಯಾರ್ಥಿ,ಸಮಾಜ ಕಾರ್ಯ ವಿಭಾಗ,ಕ. ವಿ. ವಿ ಧಾರವಾಡ.