ಚಿತ್ರದುರ್ಗ : ತಾಲೂಕಿನ ಹಿರೇಗುಂಟನೂರು ಹೋಬಳಿಯ ಭೀಮಸಮುದ್ರ ಮಜುರೆ ಬಸವಾಪುರದ ಶ್ರೀ ಮಾವಿನಹಳ್ಳಿ ಬಸವೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ಇಂದು ಸ್ವಾಮಿಯ ಕೆಂಡಾರ್ಚನೆ ಕಾರ್ಯಕ್ರಮ ನಡೆಯಿತು.
ಇಂದು ಬೆಳಿಗ್ಗೆ ಸ್ವಾಮಿಗೆ ಹೂವಿನ ಉತ್ಸವ ನಡೆದಿದ್ದು, ನಂತರ ಪಲ್ಲಕ್ಕಿಯಲ್ಲಿ ಸ್ವಾಮಿಯನ್ನು ಕುಳ್ಳರಿಸಿ ದೇವಾಲಯದ ಸುತ್ತಾ-ಮುತ್ತಾ ಪ್ರದೇಶದಲ್ಲಿ ಮೆರವಣಿಗೆಯನ್ನು ನಡೆಸಲಾಯಿತು. ರಥೋತ್ಸವದ ಅಂಗವಾಗಿ ಸ್ವಾಮಿಗೆ ಕಂಕಣಧಾರಣೆ, ಆಶ್ವೋತ್ಸವ, ವೃಷಭೋತ್ಸವ ಕಾರ್ಯಕ್ರಮ ನಡೆಯಿತು. ಕೆಂಡಾರ್ಚನೆ ಸಮಯದಲ್ಲಿ ಕಡೂರಿನಿಂದ ಬಂದಿದ್ದ ಚನ್ನವೀರಪ್ಪ ಮತ್ತು ತಂಡದವರು ಸ್ವಾಮಿಯ ಮುಂದೆ ವೀರಭದ್ರ ಸ್ವಾಮಿಯ ಒಡಪುಗಳನ್ನು ಹೇಳುವುದರ ಮೂಲಕ ಪಲ್ಲಕ್ಕಿಯ ಮೆರವಣಿಗೆಯನ್ನು ನಡೆಸಲಾಯಿತು. ಮೆರವಣಿಗೆಯ ದಾರಿಯುದ್ದಕ್ಕೂ ಆಗಮಿಸಿದ ಭಕ್ತಾಧಿಗಳು ಮಾವಿನಹಳ್ಳಿ ಬಸವೇಶ್ವರ ಮಹಾರಾಜ್ ಕೀ ಜೈ, ವೀರಭದ್ರ ಸ್ವಾಮಿಜೀ ಕೀ ಎಂಬ ಘೋಷಣೆಗಳು ಕೇಳಿ ಬಂದವು.
ಮಾರ್ಚ್ 19 ರಂದು ಸಂಜೆ 4 ಗಂಟೆಗೆ ಸ್ವಾಮಿಗೆ ಹೂವಿನ ಪಲ್ಲಕ್ಕಿ ಉತ್ಸವದ ನಂತರ 5 ಗಂಟೆಗೆ ಶ್ರೀ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಮಾ.20 ರಂದು ಸಂಜೆ 5 ಕ್ಕೆ ಕಂಕಣ ವಿಸರ್ಜನೆ ಹಾಗೂ ಮಹಾ ಮಹಾಮಂಗಳಾರತಿಯೊಂದಿಗೆ ಸ್ವಾಮಿಯ ಸೇವಾ ಕಾರ್ಯಕ್ರಮ ಮುಕ್ತಾಯವಾಗಲಿದೆ.