ಚಿತ್ರದುರ್ಗದಲ್ಲಿ ಮುಂದಿನ ತಿಂಗಳು ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಗೋವಿಂದ ಕಾರಜೋಳ ಇವರು ಚಿತ್ರದುರ್ಗ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಲಕ್ಷಣಗಳು ಕಂಡು ಬರುತ್ತಿದ್ದು, ಯಾವುದೇ ಕಾರಣಕ್ಕು ಇವರಿಗೆ ಟಿಕೇಟ್ ನೀಡಬಾರದೆಂದು ಕರುನಾಡ ವಿಜಯಸೇನೆ ಕಾರ್ಯಕರ್ತರು ಬಿಜೆಪಿ. ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಗೋವಿಂದ ಕಾರಜೋಳರವರಿಗೆ ಯಾವುದೇ ಅರಿವಿಲ್ಲ. ಹಾಗಾಗಿ ಇಂತಹವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದರೆ ಕ್ಷೇತ್ರದ ಅಭಿವೃದ್ದಿ ಹೇಗೆ ಸಾಧ್ಯ? ಹಾಲಿ ಸಂಸದ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ, ಮಾಜಿ ಸಂಸದ ಜನಾರ್ಧನಸ್ವಾಮಿ, ಯುವ ಮುಖಂಡ ಎಂ.ಸಿ.ರಘುಚಂದನ್ ಇವರುಗಳ ಪೈಕಿ ಯಾರಿಗಾದರೂ ಟಿಕೆಟ್ ನೀಡಲಿ.
ಅದನ್ನು ಬಿಟ್ಟು ಪಕ್ಷದ ವರಿಷ್ಟರು ಗೋವಿಂದ ಕಾರಜೋಳರವರಿಗೆ ಟಿಕೇಟ್ ನೀಡಿದರೆ ಬಿಜೆಪಿ. ಇಲ್ಲಿ ಕ್ಷೇತ್ರವನ್ನು ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ಬಿಜೆಪಿ. ನಾಯಕರುಗಳು ಗಂಭೀರವಾಗಿ ಪರಿಗಣಿಸಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಒತ್ತಾಯಿಸಿದರು.
ಕರುನಾಡ ವಿಜಯಸೇನೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವೀಣಗೌರಣ್ಣ, ಪ್ರಧಾನ ಕಾರ್ಯದರ್ಶಿ ಗೋಪಿನಾಥ್, ಅಣ್ಣಪ್ಪ, ನಿಸಾರ್ ಅಹಮದ್, ಜಗದೀಶ್ ಸಿ. ಅವಿನಾಶ್, ನಾಗರಾಜ್ ಮುತ್ತು, ಪ್ರದೀಪ್, ಸಂತೋಷ್ ಎನ್. ಸುರೇಶ್, ಅಖಿಲೇಶ್, ಕಮಲಮ್ಮ ಇವರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.