ಇನ್ಫೋಸಿಸ್ ಸಹ ಸಂಸ್ಥಾಪಕರಾದ ನಾರಾಯಣ ಮೂರ್ತಿ ಅವರು ತಮ್ಮ ಮೊಮ್ಮಗನಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. 243 ಕೋಟಿ ರೂಪಾಯಿ ಮೌಲ್ಯದ 15 ಲಕ್ಷ ಷೇರುಗಳನ್ನು ತಮ್ಮ ಪ್ರೀತಿಯ ಮೊಮ್ಮಗ ಏಕಾಗ್ರಹ ರೋಹನ್ ಮೂರ್ತಿಗೆ ಉಡುಗೊರೆಯಾಗಿ ನೀಡಿದ್ದಾರೆ. ಮುಂಬೈ ಷೇರು ವಿನಿಮಯ ಕೇಂದ್ರ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ.
ಎನ್ಆರ್ ನಾರಾಯಣ ಮೂರ್ತಿ ಅವರು ತಮ್ಮ ಮೊಮ್ಮಗನಿಗೆ ಕೊಟ್ಟ ಉಡುಗೊರೆಯಿಂದಾಗಿ ಕಂಪನಿಯಲ್ಲಿ ಮೂರ್ತಿ ಅವರಿಗಿದ್ದ 0.40% ಷೇರು ಕಡಿತವಾಗಿ 0.36% ನಾರಾಯಣ ಮೂರ್ತಿ ಅವರ ಬಳಿ ಉಳಿದಿದೆ.
ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ 2011ರಲ್ಲಿ ಅಪರ್ಣಾ ಕೃಷ್ಣನ್ ಎಂಬುವವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕಳೆದ ವರ್ಷ ನವೆಂಬರ್ 10ರಂದು ಏಕಗ್ರಹ ಎಂಬ ಗಂಡು ಮಗ ಜನಿಸಿದ. ಇದೀಗ ರೋಹನ್ ಮೂರ್ತಿ ಮತ್ತು ಅಪರ್ಣಾ ಕೃಷ್ಣನ್ ಅವರಿಗೆ ಜನಿಸಿದ 4 ತಿಂಗಳ ಮಗುವಿಗೆ ಎನ್ಆರ್ ನಾರಾಯಣ ಮೂರ್ತಿ ಅವರು ಬರೋಬ್ಬರಿ 240 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರಿಂದ ಏಕಾಗ್ರಹ ರೋಹನ್ ಮೂರ್ತಿ ಭಾರತದ ಅತ್ಯಂತ ಕಿರಿಯ ಕೋಟ್ಯಧಿಪತಿ ಎಂಬ ಕೀರ್ತಿಗೆ ಪಾತ್ರನಾಗಿದ್ದಾನೆ.
ಸದ್ಯ ಎನ್ ಆರ್ ನಾರಾಯಣ ಮೂರ್ತಿ ಮತ್ತು ಸುಧಾಮೂರ್ತಿ ಅವರ ಪುತ್ರ ರೋಹನ್ ಮೂರ್ತಿ ಪ್ರಸ್ತುತವಾಗಿ ಸೊರೊಕೊದಲ್ಲಿ CTO (ಮುಖ್ಯ ತಂತ್ರಜ್ಞಾನ ಅಧಿಕಾರಿ) ಆಗಿ ಕೆಲಸ ಮಾಡುತ್ತಿದ್ದಾರೆ. ಸೊರೊಕೊ ತನ್ನ ಆದಾಯವನ್ನು ಎಂದಿಗೂ ಬಹಿರಂಗಪಡಿಸದಿದ್ದರೂ, ನೆಲ್ಸನ್ಹಾಲ್ ವೆಂಡರ್ ಮೌಲ್ಯಮಾಪನ ಮತ್ತು ಅಸೆಸ್ಮೆಂಟ್ ಟೂಲ್ ಪ್ರಕಾರ, 2022 ರಲ್ಲಿ ಈ ಕಂಪನಿಯ ಆದಾಯವು ಸುಮಾರು ರೂ. 150 ಕೋಟಿ ರೂಪಾಯಿ ಆಗಿತ್ತು.