Breaking
Tue. Dec 24th, 2024

ಶಿವಮೊಗ್ಗ ಲೋಕಸಭಾ ಚುನಾವಣೆ 2024 ಜಿದ್ದಾ – ಜಿದ್ದಿ ಬಂಗಾರಪ್ಪ ಫ್ಯಾಮಿಲಿ, ಯಡಿಯೂರಪ್ಪ ಫ್ಯಾಮಿಲಿ, ಈಶ್ವರಪ್ಪ ಫ್ಯಾಮಿಲಿ ಗೆಲ್ಲೋರು ಯಾರು ?

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆ. ಮಲೆನಾಡು ಮತ್ತು ಅರೆ ಮಲೆನಾಡು ಪ್ರವೇಶಗಳನ್ನು ಇದು ಹೊಂದಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರವು ಚುನಾವಣೆ ಹೊತ್ತಲ್ಲಿ ಪ್ರತಿ ಬಾರಿಯೂ ದೇಶದ ಗಮನ ಸೆಳೆಯುವಂತಿರುತ್ತಿತ್ತು. ಈ ಬಾರಿಯೂ ಅದೇ ವಾತಾವರಣ ನಿರ್ಮಾಣವಾಗಿದೆ. ಮಾಜಿ ಸಿಎಂಗಳಿಬ್ಬರ ಕುಟುಂಬಸ್ಥರ ನಡುವಿನ ಜಿದ್ದಾ – ಜಿದ್ದಿಯು ಕುತೂಹಲ ಮೂಡಿಸಿದೆ.

ಬಿಜೆಪಿ ಭದ್ರಕೋಟೆ ಶಿವಮೊಗ್ಗ. ಲಿಂಗಾಯತ ಮತ್ತು ಈಡಿಗ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಕಳೆದ 2 ದಶಕಗಳಿಂದ ಲಿಂಗಾಯತ ನಾಯಕ ಯಡಿಯೂರಪ್ಪ  ಕುಟುಂಬದವರೇ ಮೇಲುಗೈ ಸಾಧಿಸಿದ್ದಾರೆ. ಈಡಿಗ ಸಮುದಾಯದ ದಿ. ಎಸ್.ಬಂಗಾರಪ್ಪ ಕುಟುಂಬ ಈ ಅವಧಿಯಲ್ಲಿ ಸೋಲನುಭವಿಸಿದೆ.

ಈಗ ಮತ್ತೆ ಇಬ್ಬರೂ ನಾಯಕರ ಕುಟುಂಬಸ್ಥರು ಕಣಕ್ಕಿಳಿದಿದ್ದಾರೆ. ಇದರ ನಡುವೆ ಬಿಎಸ್‌ವೈ ಕುಟುಂಬಸ್ಥರ ವಿರುದ್ಧ ಬಂಡಾಯ ಎದ್ದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ  ಸ್ವತಂತ್ರ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಕಣಕ್ಕಿಳಿಯುವುದಾಗಿ ಘೋಷಿಸಿರುವುದು ಕುತೂಹಲ ಹೆಚ್ಚಿಸಿದೆ. 

ಕ್ಷೇತ್ರ ಪರಿಚಯ  ಶಿವಮೊಗ್ಗ ಲೋಕಸಭಾ ಕ್ಷೇತ್ರ ಇಲ್ಲಿವರೆಗೆ 19 ಚುನಾವಣೆಗಳನ್ನು ಎದುರಿಸಿದೆ. 2008 ರಲ್ಲಿ ಶಿವಮೊಗ್ಗ ಕ್ಷೇತ್ರ ವ್ಯಾಪ್ತಿ ಬದಲಾಯಿತು. ಚನ್ನಗಿರಿ ಮತ್ತು ಹೊನ್ನಾಳಿ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸೇರಿತು. ಶಿವಮೊಗ್ಗದ ವ್ಯಾಪ್ತಿಗೆ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರ ಸೇರ್ಪಡೆಗೊಂಡಿತು.

ವಿಧಾನಸಭಾ ಕ್ಷೇತ್ರಗಳೆಷ್ಟು?  ಶಿವಮೊಗ್ಗ ಕ್ಷೇತ್ರಕ್ಕೆ 8 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ, ಶಿಕಾರಿಪುರ, ತೀರ್ಥಹಳ್ಳಿ, ಸಾಗರ, ಸೊರಬ, ಬೈಂದೂರು.

ಕಳೆದ 20 ವರ್ಷಗಳಿಂದ ಶಿವಮೊಗ್ಗ ಬಿಜೆಪಿ ಭದ್ರಕೋಟೆಯಾಗಿದೆ. ಸ್ವಾತಂತ್ರ ನಂತರದ ಆರಂಭದಲ್ಲಿ 3 ದಶಕಗಳ ಕಾಲ ಕ್ಷೇತ್ರದಲ್ಲಿ ಕಾಂಗ್ರೆಸ್  ಗೆದ್ದು ಬಾವುಟ ಹಾರಿಸಿತ್ತು. 1952 ರಿಂದ 1991 ರವರೆಗೆ (1967 ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷ ಗೆದ್ದಿತ್ತು) ಕಾಂಗ್ರೆಸ್ ಅಭ್ಯರ್ಥಿಗಳೇ ಗೆದ್ದು ಬೀಗಿದ್ದರು. 1996 ರಲ್ಲಿ ಕರ್ನಾಟಕ ಜನತಾ ಪಕ್ಷದಿಂದ ಸ್ಪರ್ಧಿಸಿ ಎಸ್.ಬಂಗಾರಪ್ಪ ಜಯಗಳಿಸಿ, ಕಾಂಗ್ರೆಸ್‌ನ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ್ದರು.

1998 ರಲ್ಲಿ ಆಯನೂರು ಮಂಜುನಾಥ್ ಬಿಜೆಪಿಗೆ ಮೊದಲ ಗೆಲುವು ತಂದುಕೊಟ್ಟರು. ನಂತರ ಎಸ್.ಬಂಗಾರಪ್ಪ (1999, 2004, 2005) ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆದ್ದಿದ್ದರು. ಅದಾದ ಬಳಿಕ 2009 ರಿಂದ ಇಲ್ಲಿವರೆಗೆ (2009 ಬಿ.ವೈ.ರಾಘವೇಂದ್ರ, 2024 ಬಿ.ಎಸ್.ಯಡಿಯೂರಪ್ಪ, 2028 ಮತ್ತು 2019 ಬಿ.ವೈ.ರಾಘವೇಂದ್ರ) ಕ್ಷೇತ್ರದಲ್ಲಿ ಬಿಎಸ್‌ವೈ ಕುಟುಂಬದವರೇ ಪಾರುಪತ್ಯ ಮೆರೆದಿದ್ದಾರೆ.   ಮತದಾರರ ಸಂಖ್ಯೆಯೆಷ್ಟು?

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,29,901 ಮತದಾರರಿದ್ದಾರೆ. ಇದರಲ್ಲಿ ಮಹಿಳಾ ಮತದಾರರು 8,77,761 ಹಾಗೂ ಪುರುಷ ಮತದಾರರು 8,52,107 ಇದ್ದಾರೆ.

ಕಳೆದ ಚುನಾವಣೆಯಲ್ಲಿ ಏನಾಗಿತ್ತು ?  2019 ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ.ರಾಘವೇಂದ್ರ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಸ್ಪರ್ಧೆ ಮಾಡಿದ್ದರು. ಎರಡು ಪಕ್ಷದಿಂದ ಒಬ್ಬರೇ ಅಭ್ಯರ್ಥಿಯಾದರೂ ಬಿಜೆಪಿಯ ಬಿ.ವೈ.ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ ಪರಾಭವಗೊಂಡರು. 2,23,000 ಮತಗಳ ಅಂತರದಿಂದ ರಾಘವೇಂದ್ರ ಗೆದ್ದಿದ್ದರು.

ಯಡಿಯೂರಪ್ಪ ಪಾರುಪತ್ಯ  ಶಿವಮೊಗ್ಗ ಜಿಲ್ಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರದ್ದೇ ಪಾರುಪತ್ಯ. ಸಮಾಜವಾದಿ ಹಿನ್ನೆಲೆ ಹೊಂದಿದ್ದ ಶಿವಮೊಗ್ಗ ಜಿಲ್ಲೆಯಲ್ಲಿ ಈ ಹಿಂದೆ ಬಂಗಾರಪ್ಪ ಅವರ ಪಾರುಪತ್ಯ ಇತ್ತು. 2009 ರಲ್ಲಿ ಬಂಗಾರಪ್ಪ ಸೋಲಿನ ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಆಗಿನಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಬಿಎಸ್‌ವೈ ಅವರದ್ದೇ ಆರ್ಭಟ. ಶಿವಮೊಗ್ಗ ಜಿಲ್ಲೆಯಲ್ಲಿ ಲಿಂಗಾಯತರು ಮೊದಲ ಸ್ಥಾನದಲ್ಲಿ ಇದ್ದರೆ, ನಂತರದ ಸ್ಥಾನದಲ್ಲಿ ಈಡಿಗರು ಇದ್ದಾರೆ. ಹೀಗಾಗಿ ಬಂಗಾರಪ್ಪ ನಂತರ ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ಹಿಡಿತದಲ್ಲಿ ಕ್ಷೇತ್ರ ಇದೆ.

 

ಮೈತ್ರಿಯಿಂದ ಲಾಭ ?   ಶಿವಮೊಗ್ಗ ಜಿಲ್ಲೆ ಬಿಜೆಪಿ ಭದ್ರಕೋಟೆ. ಈ ಬಾರಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಭದ್ರಾವತಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಡಿಮೆ ಅಂತರದಿಂದ ಸೋಲು ಕಂಡಿದ್ದಾರೆ. ಆದ್ದರಿಂದ ಇತರೆ ಕ್ಷೇತ್ರದಲ್ಲಿ ಜೆಡಿಎಸ್ ಹಿಡಿತ ಇಲ್ಲದಿದ್ದರೂ ಈ ಎರಡು ಕ್ಷೇತ್ರದಲ್ಲಿ ಹಾಗೂ ತೀರ್ಥಹಳ್ಳಿ ಕ್ಷೇತ್ರದಲ್ಲಿ ಒಕ್ಕಲಿಗರು ಸ್ವಲ್ಪ ಮಟ್ಟಿಗೆ ಇದ್ದಾರೆ. ಹೀಗಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಸ್ವಲ್ಪ ಮಟ್ಟಿಗೆ ಬಿಜೆಪಿಗೆ ಲಾಭ ಆಗಲಿದೆ.

ಯಡಿಯೂರಪ್ಪ ಪುತ್ರನಿಗೆ ಬಿಜೆಪಿ ಟಿಕೆಟ್   ಪುತ್ರ ಬಿ.ವೈ.ರಾಘವೇಂದ್ರಗೆ  ಮತ್ತೆ ಪಕ್ಷದ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಹಾಲಿ ಸಂಸದ ರಾಘವೇಂದ್ರ ಗೆಲುವಿಗಾಗಿ ಬಿಎಸ್‌ವೈ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಯಡಿಯೂರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಶಿಕಾರಿಪುರದ ಶಾಸಕ, ಬಿಎಸ್‌ವೈ ಪುತ್ರ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಲೋಕಸಭಾ ಚುನಾವಣೆ ಇದು. ಬಿಎಸ್‌ವೈ ಕುಟುಂಬದವರ ರಾಜಕೀಯ ಸಾಮರ್ಥ್ಯ ಪ್ರದರ್ಶನಕ್ಕೆ ಇದು ಸಕಾಲ.   

ನಟ ಶಿವರಾಜ್‌ಕುಮಾರ್ ಪತ್ನಿ ‘ಕೈ’ ಅಭ್ಯರ್ಥಿ   ಮಧು ಬಂಗಾರಪ್ಪ ಸಹೋದರಿ ಹಾಗೂ ನಟ ಶಿವರಾಜ್ ಕುಮಾರ್ ಪತ್ನಿ ಗೀತಾ ಶಿವರಾಜ್ ಕುಮಾರ್‌ ಗೆ  ಕಾಂಗ್ರೆಸ್ ಮತ್ತೆ ಶಿವಮೊಗ್ಗ ಕ್ಷೇತ್ರದ ಟಿಕೆಟ್ ಕೊಟ್ಟಿದೆ. 2014 ರಲ್ಲಿ ಯಡಿಯೂರಪ್ಪ ವಿರುದ್ಧ ಜೆಡಿಎಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧಿಸಿ ಸೋತಿದ್ದರು. ಈ ಚುನಾವಣೆ ದೇಶದ ಗಮನ ಸೆಳೆದಿತ್ತು. ಆಗ ಮಧು ಬಂಗಾರಪ್ಪ ಜೆಡಿಎಸ್ ಪಕ್ಷದಲ್ಲಿದ್ದರು. ಈಗ ಕಾಂಗ್ರೆಸ್ ಪಕ್ಷದಿಂದ ಗೀತಾ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಈಶ್ವರಪ್ಪ ಬಂಡಾಯದಿಂದ ಬಿಜೆಪಿಗೆ ಹೊಡೆತ ?   ಪುತ್ರ ಕಾಂತೇಶ್ ಹಾವೇರಿಯಲ್ಲಿ ಟಿಕೆಟ್ ಗಿಟ್ಟಿಸುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಯತ್ನ ವಿಫಲವಾಯಿತು. ತನಗೂ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಟಿಕೆಟ್ ನೀಡದೇ ಇದ್ದ ಅಸಮಾಧಾನವೂ ಈಶ್ವರಪ್ಪಗೆ ಇತ್ತು. ತಮಗೆ ಟಿಕೆಟ್ ತಪ್ಪು ಯಡಿಯೂರಪ್ಪನೇ ಕಾರಣ ಎಂದು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಆದರೆ ಈ ಆರೋಪವನ್ನು ಯಡಿಯೂರಪ್ಪ ಅಲ್ಲಗಳೆದಿದ್ದಾರೆ.

ಬಿಎಸ್‌ವೈ ಕುಟುಂಬದವರನ್ನು ಸೋಲಿಸಬೇಕು ಎಂದು ಪಣತೊಟ್ಟಿರುವ ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಹಲವು ನಾಯಕರು ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಈಶ್ವರಪ್ಪ ಅವರ ಈ ನಿರ್ಧಾರದಿಂದ ಬಿಜೆಪಿಗೆ ಹೊಡೆತ ಬೀಳುತ್ತದೆಯೇ ಎಂಬುದು ಪ್ರಶ್ನೆಯಾಗಿದೆ.  ಜಾತಿವಾರು ಲೆಕ್ಕಾಚಾರ

ಲಿಂಗಾಯತರು: 2,80,000

ಈಡಿಗರು: 2,50,000

ಒಕ್ಕಲಿಗರು: 1,50,000

ಬ್ರಾಹ್ಮಣರು: 1,50,000

ಪರಿಶಿಷ್ಟ ಜಾತಿ: 1,50,000

ಪರಿಶಿಷ್ಟ ಪಂಗಡ: 75,000

ಲಂಬಾಣಿ: 80,000

ಕುರುಬರು: 75,000

ಮುಸ್ಲಿಂ: 1,35,000

ಇತರೆ: 2,80,000

Related Post

Leave a Reply

Your email address will not be published. Required fields are marked *