ಬಹುನಿರೀಕ್ಷಿತ ‘ಪುಷ್ಪ 2’ ಸಿನಿಮಾಗೆ ಶೂಟಿಂಗ್ ನಡೆಯುತ್ತಿದೆ. ಸುಕುಮಾರ್ ಅವರು ಬಹಳ ಅದ್ದೂರಿಯಾಗಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘ಪುಷ್ಪ’ ಚಿತ್ರ ಬ್ಲಾಕ್ ಬಸ್ಟರ್ ಆಗಿದ್ದರಿಂದ ಅವರ ಸೀಕ್ವೆಲ್ ಮೇಲೆ ಭಾರಿ ನಿರೀಕ್ಷೆ ಮನೆ ಮಾಡಿದೆ. ರಶ್ಮಿಕಾ ಮಂದಣ್ಣ , ಅಲ್ಲು ಅರ್ಜುನ್ ಮುಖ್ಯಭೂಮಿಕೆ ನಿಭಾಯಿಸುತ್ತಿರುವ ‘ಪುಷ್ಪ 2’ ಸಿನಿಮಾದ ಶೂಟಿಂಗ್ ಸೆಟ್ನಿಂದ ಒಂದು ವಿಡಿಯೋ ವೈರಲ್ ಆಗಿದೆ. ಇದರಲ್ಲಿ ರಶ್ಮಿಕಾ ನಿಭಾಯಿಸುತ್ತಿರುವ ಶ್ರೀವಲ್ಲಿ ಪಾತ್ರದ ಲುಕ್ ಬಹಿರಂಗ ಆಗಿದೆ.
ಎಷ್ಟೇ ಗೌಪ್ಯತೆ ಕಾಪಾಡಿಕೊಂಡರೂ ಲೀಕ್ ಕಾಟ ತಪ್ಪುತ್ತಿಲ್ಲ. ‘ಪುಷ್ಪ 2’ ಸಿನಿಮಾದ ಶೂಟಿಂಗ್ ಸೆಟ್ನಿಂದ ವಿಡಿಯೋ ಲೀಕ್ ಆಗಿದೆ. ಈ ಮೂಲಕ ಶ್ರೀವಲ್ಲಿ ಪಾತ್ರದ ಲುಕ್ ಬಹಿರಂಗ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಸ್ವತಃ ರಶ್ಮಿಕಾ ಮಂದಣ್ಣ ಅವರ ಅಭಿಮಾನಿಗಳನ್ನು ಇದನ್ನು ಶೇರ್ ಮಾಡಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಫ್ಯಾನ್ ಪೇಜ್ಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ರಶ್ಮಿಕಾ ಮಂದಣ್ಣ ಅವರಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟ ಸಿನಿಮಾ ‘ಪುಷ್ಪ’. ಆ ಚಿತ್ರದ ಯಶಸ್ಸಿನ ಬಳಿಕ ಅವರಿಗೆ ಬಾಲಿವುಡ್ನಲ್ಲೂ ಅವಕಾಶಗಳು ಸಿಗಲು ಆರಂಭವಾದವು. ಪುಷ್ಪರಾಜ್ನ ಹೆಂಡತಿ ಶ್ರೀವಲ್ಲಿ ಪಾತ್ರ ‘ಪುಷ್ಪ 2’ ಚಿತ್ರದಲ್ಲೂ ಮುಂದುವರಿಯಲಿದೆ. ಆ ಪಾತ್ರದ ಶೂಟಿಂಗ್ನಲ್ಲಿ ರಶ್ಮಿಕಾ ಮಂದಣ್ಣ ಬ್ಯುಸಿ ಆಗಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ ಅವರು ಕೆಂಪು ಬಣ್ಣದ ಕಾಂಜೀವರಂ ಸೀರೆ ಧರಿಸಿ ಮಿಂಚಿದ್ದಾರೆ. ಮಧುಮಗಳ ರೀತಿಯಲ್ಲಿ ಮೈತುಂಬ ಆಭರಣ ಧರಿಸಿ ಅವರು ನಡೆದುಬರುತ್ತಿದ್ದಾರೆ. ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ರಶ್ಮಿಕಾ ಅವರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಹತ್ತಾರು ಮಂದಿ ಭದ್ರತೆ ನೀಡುತ್ತಿದ್ದಾರೆ.
‘ನಮ್ಮ ಶ್ರೀವಲ್ಲಿ ಎಷ್ಟು ಸೂಪರ್ ಆಗಿದ್ದಾರೆ ನೋಡಿ’ ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಆಗಸ್ಟ್ 15ರಂದು ‘ಪುಷ್ಪ 2’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದ ಬಿಡುಗಡೆ ದಿನಾಂಕದ ಬಗ್ಗೆ ಒಂದಷ್ಟು ಗೊಂದಲ ಇದೆ. ಆದರೆ ಯಾವುದೇ ಕಾರಣಕ್ಕೂ ರಿಲೀಸ್ ಡೇಟ್ ಬದಲಾಗುವುದಿಲ್ಲ ಎಂದು ಚಿತ್ರತಂಡ ಹೇಳುತ್ತಲೇ ಇದೆ.
ಅದರ ನಡುವೆಯೂ ಕೆಲವರು ಗಾಸಿಪ್ ಹಬ್ಬಿಸುತ್ತಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆ ಈ ಚಿತ್ರವನ್ನು ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿದೆ. ವಿದೇಶದಲ್ಲಿ ಕೂಡ ಪ್ರಚಾರ ಮಾಡಲಾಗುತ್ತಿದೆ. ಈ ಸಿನಿಮಾದಿಂದ ರಶ್ಮಿಕಾ ಮಂದಣ್ಣ ಅವರ ವೃತ್ತಿಜೀವನಕ್ಕೆ ದೊಡ್ಡ ತಿರುವು ಸಿಗುವ ಸಾಧ್ಯತೆ ದಟ್ಟವಾಗಿದೆ.