ಹಾಸನ : ಹಾಲು ಒಕ್ಕೂಟದ ಅಧ್ಯಕ್ಷರಾಗಿ (ಹಾಮೂಲ್ ) ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪುನರಾಯ್ಕೆಯಾಗಿದ್ದಾರೆ. ಈ ಮೂಲಕ 1994 ರಿಂದ ಈವರೆಗೆ ಸತತ 7ನೇ ಬಾರಿಗೆ ರೇವಣ್ಣ ಅವಿರೋಧ ಆಯ್ಕೆಯಾಗುವ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ.
ಕಳೆದ ಮಾ.8 ರಂದು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ 14 ಮಂದಿ ಡೈರೆಕ್ಟರ್ಸ್ ನೂತನವಾಗಿ ಅವಿರೋಧ ಆಯ್ಕೆಯಾಗಿದ್ದರು. ಅದಾದ ಬಳಿಕ ಮಂಗಳವಾರ ಹಾಮೂಲ್ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಎಲ್ಲಾ ನಿರ್ದೇಶಕರು ಸೇರಿ ರೇವಣ್ಣ ಅವರನ್ನೇ ಮತ್ತೊಮ್ಮೆ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ರೇವಣ್ಣ ಅವರು 2024 ರಿಂದ 2029 ರವರೆಗೆ ಅಧ್ಯಕ್ಷರಾಗಿರಲಿದ್ದಾರೆ. ನಂತರ ಮಾತನಾಡಿದ ರೇವಣ್ಣ, ಮತ್ತೆ ಐದು ವರ್ಷದ ಅವಧಿಗೆ ನಾನು ಅಧ್ಯಕ್ಷನಾಗಿ ಆಯ್ಕೆಯಾಗಲು ಕಾರಣರಾದ ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳನ್ನು ಪ್ರತಿನಿಧಿಸುವ ಎಲ್ಲಾ ನಿರ್ದೇಶಕರು, ಹಾಲು ಉತ್ಪಾದಕರ ಸಂಘಗಳವರಿಗೆ ಧನ್ಯವಾದ ಹೇಳಿದರು. ಹಾಲು ಒಕ್ಕೂಟದ ಎಲ್ಲರೂ, ಶಾಸಕರ ಸಹಕಾರ, ಮಾರ್ಗದರ್ಶನದಿಂದ ರೈತರ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.
ಹಾಸನ ಹಾಲು ಒಕ್ಕೂಟ ಈ ಹಂತಕ್ಕೆ ಬೆಳೆಯಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು , ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಸಹಕಾರ ಕಾರಣ. ಈ ಬಾರಿಯ ಚುನಾವಣೆಗೆ ಯಾವುದೇ ರೀತಿಯಲ್ಲಿ ಖರ್ಚು ಮಾಡದೆ ಎಲ್ಲವೂ ಅವಿರೋಧ ಆಯ್ಕೆಯಾಗಿದೆ. ಹಾಲು ಉತ್ಪಾದನೆಯಲ್ಲಿ ಹಾಮೂಲ್ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು. 1984 ರಿಂದಲೇ ನಾನು ಹಾಮೂಲ್ ನಿರ್ದೇಶಕನಾಗಿದ್ದೆ. 1994 ರಿಂದ ಅಧ್ಯಕ್ಷನಾಗಿ ಡೇರಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದರು.
ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ, ನೂತನ ಅಧ್ಯಕ್ಷರಾದ ರೇವಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದರು. ಹಾಸನ ಹಾಲು ಒಕ್ಕೂಟದಿಂದ ದಿನವಹಿ 12.50 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಜಿಲ್ಲೆಯಲ್ಲಿ ಹೈನೋದ್ಯಮ ಅಭಿವೃದ್ಧಿಗೆ ರೇವಣ್ಣ ಅವರ ಕೊಡುಗೆ ಅಪಾರ ಇದೆ. ಇದರಿಂದ ಹಲವು ರೈತರಿಗೆ ವರದಾನವಾಗಿದೆ. ಮುಂದಿನ ದಿನಗಳಲ್ಲಿ ಹಾಮೂಲ್ ಹಾಲು ಉತ್ಪಾದನೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನಕ್ಕೆ ಏರಲಿ ಎಂದು ಆಶಿಸಿದರು. ಈ ವೇಳೆ ನಿರ್ದೇಶಕರಾದ ಸ್ವಾಮಿಗೌಡ, ನಾರಾಯಣಗೌಡ, ಸತೀಶ್ ಮೊದಲಾದವರಿದ್ದರು.