ಚಿಕ್ಕಮಗಳೂರು, ಮಾ.21: ಸುಖ ಪ್ರಾಪ್ತಿ, ಸಂತಾನ ಭಾಗ್ಯ, ಅಶಾಂತಿ ನಿವಾರಣೆ, ವಿಘ್ನ ನಾಶ.. ಇತ್ಯಾದಿ ಸಮಸ್ಯೆಗಳಿಗೆ ಜನರು ದೇವರ ಮೊರೆ ಹೋಗುವುದು ಉಂಟು. ಅಷ್ಟೇ ಅಲ್ಲದೆ, ಇತ್ತೀಚಿನ ದಿನಗಳಲ್ಲಿ ಯುವಕರು ತಮಗೆ ಕನ್ಯೆ ಸಿಗುತ್ತಿಲ್ಲವೆಂದು ಕೊರಗುವುದು ಉಂಟು. ಹೀಗಿದ್ದಾಗ ಮದುವೆ ಭಾಗ್ಯಕ್ಕಾಗಿ ದೇವರಿಗೆ ಹರಕೆ ಹೊತ್ತುಕೊಳ್ಳುವುದನ್ನು ನೋಡಿದ್ದೇವೆ. ದೇವರಿಗೆ ಪತ್ರ ಬರೆಯುವುದು ಕೂಡ ನೋಡಿದ್ದೇವೆ.
ವರ್ಷಕ್ಕೊಮ್ಮೆ ದೇವರ ಕಾಣಿಕೆ ಹುಂಡಿಯ ಬೀಗ ತೆರೆದಾಗ ನೋಟು, ಚಿಲ್ಲರೆಯ ಜೊತೆಗೆ ಒಂದಷ್ಟು ಪ್ರೇಮ ನಿವೇದನಾ ಪತ್ರ, ಮದುವೆ ಭಾಗ್ಯ ಕರುಣಿಸುವ ಪತ್ರವೂ ಕಾಣ ಸಿಗುತ್ತವೆ. ಇದೀಗ, ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ಬ್ಯಾಡಿಗೆರೆ ಗ್ರಾಮದ ಯುವಕರು ತಮಗೆ ಮದುವೆ ಭಾಗ್ಯ ಕರುಣಿಸೋ ಭಗವಂತ ಎಂದು ದೇವರಿಗೆ ತಮ್ಮ ಹೆಸರುಗಳನ್ನು ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ ಮಾರಾಯ್ರೆ.
ಹೌದು, ಬ್ಯಾಡಿಗೆರೆ ಗ್ರಾಮದ 30ಕ್ಕೂ ಹೆಚ್ಚು ಯುವಕರು ತಮಗೆ 35 ವರ್ಷ ದಾಟಿದರೂ ಮದುವೆಯಾಗಿಲ್ಲ ಚಿಂತೆಯಲ್ಲಿದ್ದಾರೆ. ಎಷ್ಟೇ ಹುಡುಕಾಡಿದರೂ ಹೆಣ್ಣು ಕೊಡಲು ಒಲ್ಲೆ ಎನ್ನುತ್ತಿದ್ದಾರೆ. ಕೊನೆಗೆ, ಮದುವೆ ಭಾಗ್ಯ ಕರುಣಿಸೋ ಭಗವಂತ ಎಂದು ಬ್ರಹ್ಮಚಾರಿ ಯುವಕರು ಕಾಗದದಲ್ಲಿ ತಮ್ಮ ಹೆಸರುಗಳನ್ನ ಬರೆದು ಹುಂಡಿಗೆ ಹಾಕಿದ್ದಾರೆ.
ಊರಿನ ಮುಖ್ಯಸ್ಥರು ಹಾಗೂ ಪರದೇಶಪ್ಪನ ಮಠದ ಗುರುಗಳಾದ ಮಧುಕುಮಾರ್ ಶಾಸ್ತ್ರಿ ಸುಮಾರು 30ಕ್ಕೂ ಹೆಚ್ಚು ಬ್ರಹ್ಮಚಾರಿ ಯುವಕರ ಹೆಸರುಗಳನ್ನ ಪಟ್ಟಿ ಮಾಡಿ, ಆದಷ್ಟು ಬೇಗ ಹುಡುಗಿ ಸಿಗಲೆಂದು ವಿಶೇಷ ಪ್ರಾರ್ಥನೆ ಸಲ್ಲಿಸಿ ಯುವಕರ ಪಟ್ಟಿಯನ್ನು ಕಾಣಿಕೆ ಹುಂಡಿಗೆ ಹಾಕಿ ಇನ್ನೊಂದು ಪಟ್ಟಿಯನ್ನು ಪರದೇಶಪ್ಪನ ಮಠಕ್ಕೆ ಕಳುಹಿಸಿದ್ದಾರೆ.
ಸುಗ್ಗಿ-ಜಾತ್ರಾ ಮಹೋತ್ಸವದ 4ನೇ ದಿನ ಈ ಕಾರ್ಯ ಮಾಡಲಾಗಿದೆ. ಎಷ್ಟೆ ಹುಡುಕಿದರೂ ಹುಡುಗಿ ಸಿಗುತ್ತಿಲ್ಲ. ವಯಸ್ಸು ಹೆಚ್ಚಾಗುತ್ತಿದೆ. ನಮ್ಮೆಲ್ಲರಿಗೂ ಮದುವೆ ಭಾಗ್ಯ ಕರುಣಿಸೋ ದೇವ ಎಂದು ಬೇಡಿಕೊಂಡಿದ್ದಾರೆ. ಒಂದು ವೇಳೆ ನಮಗೆ ಹುಡುಗಿ ಸಿಗದಿದ್ದರೆ ಮಠ ಸೇರಿಕೊಳ್ಳುವುದಾಗಿ ಪರದೇಶಪ್ಪ ಮಠದ ಗುರುಗಳಾದ ಮಧುಕುಮಾರ್ ಶಾಸ್ತ್ರಿಯವರಿಗೆ ಹೇಳುವ ಮೂಲಕ ಯುವಕರು ಅರ್ಚಕರಿಗೆ ನಗೆಚಟಾಕಿ ಹಾರಿಸಿದ್ದಾರೆ