ಬೆಂಗಳೂರು: ರಾಜ್ಯದಲ್ಲಿ ಬಾಕಿ ಇರುವ 21 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಸಂಬಂಧ ದಿಲ್ಲಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಚುನಾವಣಾ ಸಮಿತಿ (ಸಿಇಸಿ) ಸಭೆ ಒಟ್ಟು 17 ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳಿಸಿದೆ. ಈ ಪೈಕಿ ಬಹುತೇಕ ಹೊಸ ಮುಖಗಳಾಗಿವೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 21 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ನಡೆಯಿತು. ಆದರೆ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬಳ್ಳಾರಿ ಈ ನಾಲ್ಕು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಂಡಿಲ್ಲ.
ಎಐಸಿಸಿ ನಾಯಕಿ ಸೋನಿಯಾ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದ ಸಿಇಸಿ ಸಭೆಯಲ್ಲಿ ಒಟ್ಟು 17 ಕ್ಷೇತ್ರಗಳ ಟಿಕೆಟ್ ಅಂತಿಮಗೊಳಿಸಲಾಗಿದೆ. ಇನ್ನು ರಾಜ್ಯದ 7 ಕ್ಷೇತ್ರಗಳಿಗೆ ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿಈಗಾಗಲೇ ಟಿಕೆಟ್ ಘೋಷಣೆಯಾಗಿದೆ.
ಕುಟುಂಬಸ್ಥರಿಗೆ 5 ಟಿಕೆಟ್ ಅಂತಿಮ
ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳಕ್ಕರ್ ಪುತ್ರ ಮೃಣಾಲ್‌ಗೆ ಹಾಗೂ ಚಿಕ್ಕೋಡಿಯಿಂದ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾಗೆ ಅವಕಾಶ ನೀಡಲಾಗಿದ್ದು, ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತ ಪಾಟೀಲ್‌ಗೆ ಬಾಗಲಕೋಟೆಯಿಂದ ಟಿಕೆಟ್ ನೀಡಲಾಗಿದೆ. ಶಾಮನೂರು ಶಿವಶಂಕರಪ್ಪ ಸೊಸೆ ಪ್ರಭಾ ಮಲ್ಲಿಕಾರ್ಜುನಗೆ ದಾವಣಗೆರೆಯಿಂದ ಹಾಗೂ ಸಚಿವ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯ ರೆಡ್ಡಿಗೆ ಬೆಂಗಳೂರು ದಕ್ಷಿಣದಿಂದ ಟಿಕೆಟ್ ಅಂತಿಮಗೊಳಿಸಲಾಗಿದೆ.
ಸಿಇಸಿ ಅಂತಿಮಗೊಳಿಸಿರುವ ಅಭ್ಯರ್ಥಿಗಳ ವಿವರ
- ಚಿತ್ರದುರ್ಗ -ಬಿ.ಎನ್.ಚಂದ್ರಪ್ಪ
- ಬೆಳಗಾವಿ – ಮೃಣಾಲ್ ಹೆಬ್ಬಾಳಕರ್
- ಚಿಕ್ಕೋಡಿ – ಪ್ರಿಯಾಂಕಾ ಜಾರಕಿಹೊಳಿ
- ಬಾಗಲಕೋಟೆ – ಸಂಯುಕ್ತಾ ಪಾಟೀಲ್
- ಧಾರವಾಡ – ವಿನೋದ್ ಅಸುಟಿ
- ದಾವಣಗೆರೆ – ಪ್ರಭಾ ಮಲ್ಲಿಕಾರ್ಜುನ
- ಕೊಪ್ಪಳ – ರಾಜಶೇಖರ ಹಿಟ್ನಾಳ್
- ಕಲಬುರಗಿ – ರಾಧಾಕೃಷ್ಣ ದೊಡ್ಡಮನಿ
- ಬೀದರ್ – ರಾಜಶೇಖರ್ ಪಾಟೀಲ್
- ದಕ್ಷಿಣ ಕನ್ನಡ – ಪದ್ಮರಾಜ್
- ಉಡುಪಿ -ಚಿಕ್ಕಮಗಳೂರು -ಜಯಪ್ರಕಾಶ್ ಹೆಗ್ಡೆ
- ಬೆಂಗಳೂರು ದಕ್ಷಿಣ – ಸೌಮ್ಯ ರೆಡ್ಡಿ
- ಬೆಂಗಳೂರು ಸೆಂಟ್ರಲ್ -ಮನ್ಸೂರ್ ಅಲಿಖಾನ್
- ಬೆಂಗಳೂರು ಉತ್ತರ -ಪ್ರೊ.ರಾಜೀವ್ ಗೌಡ
- ಮೈಸೂರು -ಎಂ.ಲಕ್ಷ್ಮಣ್
- ರಾಯಚೂರು -ಜಿ.ಕುಮಾರ ನಾಯಕ್
- ಉತ್ತರ ಕನ್ನಡ -ಡಾ.ಅಂಜಲಿ ನಿಂಬಾಳ್ಕರ್
ನಾಲ್ಕು ಕ್ಷೇತ್ರ ಪೆಂಡಿಂಗ್
ಕೋಲಾರ ಮೀಸಲು ಕ್ಷೇತ್ರದ ಟಿಕೆಟ್ ವಿಚಾರದಲ್ಲಿಕಗ್ಗಂಟು ಮುಂದುವರಿದಿದೆ. ಸಚಿವ ಕೆ.ಎಚ್.ಮುನಿಯಪ್ಪ ಅವರು ಪರಿಶಿಷ್ಟ ಎಡಗೈ ಕೋಮಿಗೆ ಹಾಗೂ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಮತ್ತಿತರರು ಪರಿಶಿಷ್ಟ ಬಲಗೈ ಕೋಮಿನವರಿಗೆ ಟಿಕೆಟ್ ನೀಡುವಂತೆ ಜಟಾಪಟಿಗಿಳಿದಿದ್ದಾರೆ. ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಸುನಿಲ್ ಬೋಸ್‌ಗೆ ಪಕ್ಷದೊಳಗೆ ವಿರೋಧವಿರುವ ಹಿನ್ನೆಲೆಯಲ್ಲಿಇನ್ನೂ ಟಿಕೆಟ್ ಫೈನಲ್ ಮಾಡಿಲ್ಲ.