ನವದೆಹಲಿ : ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಭೇಟಿಯಾಗಿ ಕಾನೂನು ನೆರವು ನೀಡುವ ಭರವಸೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು (ಶುಕ್ರವಾರ) ಅರವಿಂದ್ ಕೇಜ್ರಿವಾಲ್ ಅಥವಾ ಅವರ ಕುಟುಂಬವನ್ನು ಅವರು ಭೇಟಿಯಾಗುವ ಸಾಧ್ಯತೆಗಳಿವೆ.
ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ವಶಕ್ಕೆ ಮಡೆದುಕೊಂಡರು. ಬಳಿಕ ಅವರನ್ನು ಅಧಿಕಾರಿಗಳು ಬಂಧಿಸಿ ಇಡಿ ಪ್ರಧಾನ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.
ಇಡಿ ಜಾರಿಗೊಳಿಸಿದ್ದ 9 ಸಮನ್ಸ್‌ಗಳಿಗೆ ಉತ್ತರಿಸದೇ, ಸತತವಾಗಿ ವಿಚಾರಣೆಗೆ ಗೈರಾಗಿದ್ದರು. ಅಲ್ಲದೇ ಅಕ್ರಮ ಹಣ ವರ್ಗಾವಣೆ ಕುರಿತಂತೆ ಜಾರಿಗೊಳಿಸಲಾಗಿದ್ದ ಸಮನ್ಸ್ ರದ್ದುಗೊಳಿಸುವಂತೆ ದೆಹಲಿ ಹೈಕೋರ್ಟ್‍ಗೆ ಕೇಜ್ರಿವಾಲ್ ಮನವಿ ಸಲ್ಲಿಸಿದ್ದರು. ಅವರ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಲಿಲ್ಲ.
ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ದೆಹಲಿ ಸಚಿವ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅತಿಶಿ, ಜಾರಿ ನಿರ್ದೇಶನಾಲಯದ ಹಿಂದೆ ರಾಜಕೀಯ ಮಾಡುವುದನ್ನು ನಿಲ್ಲಿಸುವಂತೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇಂದು ಬಿಜೆಪಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದೆ.
ಅವರು ಇಬ್ಬರು ವಿರೋಧ ಪಕ್ಷದ ಮುಖ್ಯಮಂತ್ರಿಗಳನ್ನು ಬಂಧಿಸಿದ್ದಾರೆ ಮತ್ತು ಪಕ್ಷದ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ನೀವು ಹೋರಾಡಲು ಬಯಸಿದರೆ, ರಾಜಕೀಯ ಕ್ಷೇತ್ರದಲ್ಲಿ, ಚುನಾವಣಾ ಕ್ಷೇತ್ರದಲ್ಲಿ ಹೋರಾಡಲು ಮುಂದೆ ಬನ್ನಿ, ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದು ಸವಾಲು ಹಾಕಿದ್ದಾರೆ.
ಕೇಜ್ರಿವಾಲ್ ಅವರ ಬಂಧನವನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್‍ಗೆ ಮನವಿ ಮಾಡಿದ್ದೇವೆ ಮತ್ತು ತುರ್ತು ವಿಚಾರಣೆಯನ್ನು ಕೋರಿದ್ದೇವೆ ಎಂದು ಅವರು ತಿಳಿಸಿದ್ದಾರೆ.