ತುಮಕೂರು: ಮಾಜಿ ಸಂಸದ ಸಿ.ಪಿ ಮೂಡಲಗಿರಿಯಪ್ಪ ವಯೋಸಹಜ ಕಾಯಿಲೆಯಿಂದ ಯಶವಂತಪುರದ ಮಣಿಪಾಲ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಕಾಯಿಲೆಯಿಂದ ಮೂಡಲಗಿರಿಯಪ್ಪ (84) ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಮೃತರು ಪುತ್ರ ಮಾಜಿ ಶಾಸಕ ಸಿಎಂ ರಾಜೇಶ್ ಗೌಡ, ಪುತ್ರಿ ಕವಿತಾ ಹಾಗೂ ಅಪಾರ ಬಂಧು-ಬಾಂಧವರನ್ನು ಅಗಲಿದ್ದಾರೆ.
ಇವರ ಅಂತ್ಯಸಂಸ್ಕಾರ ಭಾನುವಾರ (ಮಾ.24) ಬೆಳಗ್ಗೆ 10 ಗಂಟೆಗೆ ಸಿರಾ ತಾಲೂಕಿನ ಚಿರತಹಳ್ಳಿಯಲ್ಲಿ ನಡೆಯಲಿದೆ. ಮೂಲತಃ ಶಿರಾ ತಾಲೂಕಿನ ಚಿರತಹಳ್ಳಿ ಗ್ರಾಮದವರಾಗಿದ್ದ ಮೂಡಲಗಿರಿಯಪ್ಪ, ಮೂರು ಬಾರಿ (1989, 1991, 1998) ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು.
ಅಲ್ಲದೇ ಒಂದು ಬಾರಿ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು. ನಂತರ 1980 ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಸಂವಿಧಾನ ತಿದ್ದುಪಡಿ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದಾದ ಬಳಿಕ 1985 ಮತ್ತು 1989 ಸಿರಾ ಕ್ಷೇತ್ರದ ವಿಧಾನಸಭಾ ಸದಸ್ಯರಾದರು. ಜೊತೆಗೆ ಅಧೀನ ಶಾಸನ ಸಮಿತಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದರು. 1989 ಹಾಗೂ 1991 ಚಿತ್ರದುರ್ಗದಿಂದ 9ನೇ ಲೋಕಸಭೆಯಲ್ಲಿ ಸಂಸದರಾಗಿ ಆಯ್ಕೆಯಾದರು. ಇದರ ಜೊತೆಗೆ ಕಾನೂನು ಮತ್ತು ನ್ಯಾಯ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿ ನೇಮಕವಾದರು.
1991 ಮತ್ತು 1996 ಚಿತ್ರದುರ್ಗದಿಂದ 10ನೇ ಲೋಕಸಭೆಯಲ್ಲಿ ಸಂಸದರಾಗಿ ಜಯಗಳಿಸಿದರು. 1998, 1999ರಲ್ಲಿ ಚಿತ್ರದುರ್ಗದಿಂದ ಮೂರನೇ ಬಾರಿಗೆ ಲೋಕಸಭೆ ಪ್ರವೇಶಿಸಿದರು. ಆಹಾರ, ನಾಗರಿಕ ಸರಬರಾಜು ಮತ್ತು ಸಾರ್ವಜನಿಕ ವಿತರಣಾ ಸಮಿತಿಯ ಸದಸ್ಯ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪಸಮಿತಿ-ಎ. ಸದನದ ಸಭೆಗಳಿಗೆ ಸದಸ್ಯರ ಗೈರುಹಾಜರಿ ಸಮಿತಿಯ ಸದಸ್ಯ, ಕಾರ್ಮಿಕ ಸಚಿವಾಲಯದ ಸಲಹಾ ಸಮಿತಿಯ ಸದಸ್ಯರಾಗಿದ್ದರು. ಹೀಗೆ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.