ಬೆಂಗಳೂರು: ಮಂಡ್ಯ, ಹಾಸನ, ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನ ಆಗಿದೆ. ಆದ್ರೆ ಸುಮಲತಾ ಅವರ ಟಿಕೆಟ್ ಬಗ್ಗೆ ತೀರ್ಮಾನ ಆಗಿಲ್ಲ ಎಂದು ಲೋಕಸಭಾ ಚುನಾವಣಾ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ತಿಳಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದ ವೃಕ್ಷ ಸಭಾಂಗಣದಲ್ಲಿ ನಡೆಯುತ್ತಿರುವ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮಂಡ್ಯ, ಹಾಸನ, ಕೋಲಾರ ಮೂರು ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನ ಆಗಿದೆ. ಸುಮಲತಾ ಅವರ ಟಿಕೆಟ್ ತೀರ್ಮಾನ ಆಗಿಲ್ಲ ಎಂದು ಹೇಳಿದ್ದು ಆಗ ಸತ್ಯ ಆಗಿತ್ತು. ಈಗ ಜೆಡಿಎಸ್‌ಗೆ ಬಿಟ್ಟು ಕೊಡುವ ಬಗ್ಗೆ ತೀರ್ಮಾನ ಆಗಿದೆ. ಸುಮಲತಾ ಅವರ ಪಾತ್ರ ಬಹಳ ದೊಡ್ಡದಿದೆ. ಅವರ ರಾಜಕೀಯ ಭವಿಷ್ಯವು ಸಹ ಬಹಳ ಉತ್ತಮ ಆಗಿರಲಿದೆ ಎಂದು ಹೇಳಿದ್ದಾರೆ.
ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಗೌಡ್ರು, ಹೆಚ್‌ಡಿಕೆ : ಚುನಾವಣೆ ಪ್ರಚಾರ ಕಾರ್ಯ ಆರಂಭ ಆದ್ಮೇಲೆ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಒಟ್ಟಾಗಿ ಕೆಲಸ ಮಾಡುತ್ತೇವೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಕೋಲಾರದಲ್ಲಿ ಸಂಸದ ನಮ್ಮ ಕಾರ್ಯಕರ್ತ, ಅತ್ಯಂತ ಸಮರ್ಪಣಾ ಭಾವದ ವ್ಯಕ್ತಿ. ಅವರ ರಾಜಕೀಯ ಭವಿಷ್ಯದ ಬಗ್ಗೆಯೂ ಯೋಚನೆ ಮಾಡುತ್ತೇವೆ. ನಾನು ಯಾವುದೇ ಒಳಜಗದ ಬಗ್ಗೆ ಚಿಂತೆ ಮಾಡಲ್ಲ, ದೊಡ್ಡ ಪಕ್ಷ ಕೋಟ್ಯಂತರ ಕಾರ್ಯಕರ್ತರು ಇದ್ದಾರೆ. ಅಸಮಾಧಾನಿತರು ಇದ್ದೇ ಇರ್ತಾರೆ, ಇದ್ಯಾವುದನ್ನೂ ನೋಡಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ.
ಡಿ.ವಿ ಸದಾನಂದಗೌಡರ ಶುದ್ಧೀಕರಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಶುದ್ಧೀಕರಣ ಹಿಂದೂ ಸಂಸ್ಕೃತಿ. ನಮ್ಮನ್ನು ನಾವು ಯಾವಾಗಲೂ ಶುದ್ದೀಕರಣ ಮಾಡಿಕೊಳ್ಳುತ್ತೇವೆ. ಅವರು ಬಿಜೆಪಿಯವರು ಬಿಜೆಪಿಯಲ್ಲೇ ಇರ್ತಾರೆ. ಬಿಜೆಪಿಯಲ್ಲಿ ಸದಾಕಾಲ ಶುದ್ದೀಕರಣ ಆಗ್ತಾನೆ ಇರುತ್ತೆ. ಇದೇನು ಹೊಸದಲ್ಲ ಎಂದು ರಾಧಾ ಮೋಹನ್ ದಾಸ್ ಅಗರವಾಲ್ ಹೇಳಿದ್ದಾರೆ.
6 ಬಾರಿ ಮೋದಿ ರಾಜ್ಯಕ್ಕೆ ಬರುವ ನಿರೀಕ್ಷೆ : ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಬೆಳಗಾವಿಯಲ್ಲಿ ಯಾರಿಗಾದರೂ ಟಿಕೆಟ್ ಕೊಡಿ, ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಲು ಅಲ್ಲಿಯ ಲೀಡರ್ ಬಂದಿದ್ದರು. ಜಗದೀಶ್ ಶೆಟ್ಟರ್ ವಿರುದ್ಧವಾಗಿ ಮಾತಾಡಿದ್ದು ನನಗೆ ಗೊತ್ತಿಲ್ಲ. ನಿಮಗೆ ಮಾಹಿತಿ ಇರಬಹುದು. ಮೋದಿ ಕರ್ನಾಟಕವನ್ನು ಬಹಳ ಪ್ರೀತಿಸುತ್ತಾರೆ. ಈಗಾಗಲೇ ಎರಡು ಸಭೆ ಮಾಡಿದ್ದಾರೆ.
ಮತ್ತೆ-ಮತ್ತೆ ಬರಬೇಕು ಎಂದು ವಿನಂತಿ ಮಾಡುತ್ತೇನೆ. ಕೇವಲ ಎರಡು ದಿನದ ತಯಾರಿಯಲ್ಲಿ ಬಹಳ ಅದ್ಭುತವಾಗಿ ಮೋದಿ ಕಾರ್ಯಕ್ರಮ ನಡೆದಿದೆ. ಉತ್ತರ ಪ್ರದೇಶದಲ್ಲೂ ಇಷ್ಟೊಂದು ಅದ್ಭುತವಾಗಿ ಕಾರ್ಯಕ್ರಮ ಮಾಡಲು ಸಾಧ್ಯವಾಗಿಲ್ಲ ರಾಜ್ಯಕ್ಕೆ ಎಷ್ಟು ಸಮಯ ಕೊಡ್ತಾರೆ ನೋಡಬೇಕು. 6 ಬಾರಿ ಮೋದಿ ರಾಜ್ಯಕ್ಕೆ ಬರುವ ನೀರಿಕ್ಷೆ ಇದೆ ಎಂದು ವಿವರಿಸಿದ್ದಾರೆ.