ಬೆಂಗಳೂರು, (ಮಾರ್ಚ್ 24): ರಾಜ್ಯದಲ್ಲಿ ಲೋಕಸಭೆ ಚುನಾವಣೆ 2024 ರ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಇದರ ಮಧ್ಯೆ ಬಿಜೆಪಿ ಹೈಕಮಾಂಡ್, ಕೆಆರ್ಪಿಪಿ ಸಂಸ್ಥಾಪಕ, ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರನ್ನು ಮರಳಿ ಬಿಜೆಪಿಗೆ ಸೇರಿಸಿಕೊಳ್ಳಲು ಗ್ರೀನ್ ಸಿಗ್ನಲ್ ನೀಡಿದೆ.
ಇತ್ತೀಚೆಗಷ್ಟೇ ಈ ಬಗ್ಗೆ ಚರ್ಚಿಸಲು ಹೈಕಮಾಂಡ್, ಶ್ರೀರಾಮುಲು ಅವರನ್ನು ಕರೆಯಿಸಿಕೊಂಡು ಮಾತುಕತೆ ನಡೆಸಿತ್ತು. ಬಳಿಕ ಖುದ್ದು ಅಮಿತ್ ಶಾ, ಜನಾದರ್ನ ರೆಡ್ಡಿಯನ್ನು ದೆಹಲಿಗೆ ಕರೆಯಿಸಿಕೊಂಡು ಅಂತಿಮ ಸುತ್ತಿನ ಮಾತುಕತೆ ನಡೆಸಿದ್ದರು. ಇದೀಗ ರೆಡ್ಡಿಯನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಮುಹೂರ್ತ ಸಹ ಫಿಕ್ಸ್ ಆಗಿದೆ. ನಾಳೆ(ಮಾರ್ಚ್ 25) ಜನಾರ್ದನ ರೆಡ್ಡಿ ಬಿಜೆಪಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಈ ಬಗ್ಗೆ ತಮ್ಮ ಬೆಂಬಲಿಗರಿಗೆ ತಿಳಿಸಲು ಇಂದು ಸಂಜೆ ಮಹತ್ವದ ಸಭೆ ಕರೆದಿದ್ದಾರೆ.
ಹೌದು..ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾದರ್ನ ರೆಡ್ಡಿ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆಯನ್ನು ಇಂದು (ಮಾರ್ಚ್ 24) ಸಂಜೆ ಬೆಂಗಳೂರಿನಲ್ಲಿ ಕರೆದಿದ್ದು, ಬಿಜೆಪಿ ಸೇರ್ಪಡೆ ಬಗ್ಗೆ ತಿಳಿಸಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಪಾರಿಜಾತ ಅಪಾರ್ಟ್ಮೆಂಟ್ ನಲ್ಲಿ ಕೆಆರ್‌ಪಿಪಿ ಪಕ್ಷದ ಮುಖಂಡರ ಜತೆ ಸಭೆ ನಡೆಯಲಿದ್ದು, ಸಭೆ ಬಳಿಕ ಸಂಜೆ 5 ಗಂಟೆಗೆ ರೆಡ್ಡಿ ತಮ್ಮ ನಿರ್ಧಾರವನ್ನು ಬಹಿರಂಗಪಡಿಸಲಿದ್ದಾರೆ.
ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜನಾದರ್ನ ರೆಡ್ಡಿ ಕಾಂಗ್ರೆಸ್ಗೆ ಮತ ನೀಡಿದ್ದರು. ಸಿಎಂ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಖುದ್ದು ಆಹ್ವಾನಿಸಿ ಮಾತುಕತೆ ನಡೆಸಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಲು ಒಪ್ಪಿದ್ದರು. ಇದೀಗ ಲೋಕಸಭೆ ಚುನಾವಣೆ ಪೂರ್ಣ ಅಮಿತ್ ಶಾ ಅಹ್ವಾನಿಸಿರುವ ಕಾರಣ ರೆಡ್ಡಿ ತಮ್ಮ ನಿಲುವು ಬದಲಿಸಿ ಬಿಜೆಪಿ ಸೇರ್ಪಡೆಯಾಗಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ಈ ನಡುವೆ ಒಂದು ಕಾಲದ ಆಪ್ತಮಿತ್ರ, ಬಳ್ಳಾರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರು ಜನಾರ್ದನ ರೆಡ್ಡಿ ಅವರನ್ನು ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಅಮಿತ್ ಶಾ ಮತ್ತು ಜೆಪಿ ನಡ್ಡಾ ಅವರ ಜೊತೆ ಮಾತುಕತೆ ನಡೆಸಿದ್ದರು. ರೆಡ್ಡಿ ಅವರನ್ನು ಸೇರಿಸಿಕೊಂಡರೆ ಕೊಪ್ಪಳ ಮತ್ತು ಬಳ್ಳಾರಿಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಎನ್ನುವುದನ್ನು ತಿಳಿಸಿದ್ದರು. ಹೀಗಾಗಿ ಖುದ್ದು ಶಾ, ರೆಡ್ಡಿಯನ್ನು ದಿಲ್ಲಿಗೆ ಕರೆಯಿಸಿಕೊಂಡು ಮಾತುಕತೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.