ಚಿತ್ರದುರ್ಗ, ಮಾ, 24 : ಜೀವನ ಮೌಲ್ಯ ಎತ್ತಿ ಹಿಡಿಯುವ ಸೇವಾ ಭಾವ ರೂಢಿಸಿಕೊಳ್ಳುವ, ಜೀವನದಲ್ಲಿ ಬರುವ ಎಂತಹುದೇ ಘಟನೆಗಳಿಗೆ ಅಂಜದೆ ಸಂಯಮ ಕಾಯ್ದುಕೊಳ್ಳುವ, ನಾಯಕತ್ವ ಗುಣ ಪ್ರಾಪ್ತವಾಗುವ, ವೃತ್ತಿ ಗೌರವ, ಸಹಬಾಳ್ವೆ, ಏಕತೆ ಮತ್ತಿತರ ಗುಣ ವಿಶೇಷಗಳನ್ನು ರಾಷ್ಟ್ರೀಯ ಸೇವಾ ಯೋಜನೆಯಿಂದ ಅರಿಯಲು ಆ ಮೂಲಕ ಸಾಗಲು ಸಹಕಾರಿಯಾಗುತ್ತದೆ ಎಂದು ಎಸ್. ಜೆ. ಎಂ. ಪಾಲಿಟೆಕ್ನಿಕ್ ನ ಉಪನ್ಯಾಸಕರು ಹಾಗೂ ಎನ್ ಎಸ್ ಎಸ್ ಶಿಬಿರಾಧಿಕಾರಿಯೂ ಆದ ಟಿ. ಗೋವಿಂದರಾಜು ಅವರು ವಿದ್ಯಾರ್ಥಿಗಳನ್ನುದ್ದೇಶಿ ಮಾತನಾಡಿದರು.
ಅವರು ಚಿತ್ರದುರ್ಗದ ಎಸ್.ಜೆ .ಎಂ.ವಿದ್ಯಾಪೀಠ , ಯುವ ಸಬಲೀಕರಣ ಇಲಾಖೆ ಕರ್ನಾಟಕ ಸರ್ಕಾರ,ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಎಸ್.ಜೆ. ಎಂ ಪಾಲಿಟೆಕ್ನಿಕ್( ಅನುದಾನಿತ) ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ತಾಲ್ಲೂಕಿನ ಪಂಡರಹಳ್ಳಿ ಗ್ರಾಮದಲ್ಲಿ ನಡೆದಿರುವ ಎನ್ಎಸ್ಎಸ್ ಶಿಬಿರದ ನಾಲ್ಕನೇ ದಿನವಾದ ಶನಿವಾರ ನಡೆದ ವೇದಿಕೆಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್. ಜೆ. ಎಂ. ಪಾಲಿಟೆಕ್ನಿಕ್ ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾದ ಪಿ. ಎ.ರಘು ಅವರು ರಾಷ್ಟ್ರೀಯ ಸೇವಾ ಯೋಜನಾ ಶಿಬಿರವು ವಿದ್ಯಾರ್ಥಿಗಳಿಗೆ ರಚನಾತ್ಮಕ ಕಾರ್ಯಗಳಲ್ಲಿ ತೊಡಗಲು ಪ್ರೇರಣೆ ನೀಡುತ್ತದೆ ಎಂದರು.
ಸಾಹಿತಿ ಹಾಗೂ ರಂಗ ಕಲಾವಿದರೂ ಆದ ಹನುಮಂತಪ್ಪ ಪೂಜಾರ್ ಅವರು ಇಂತಹ ಶಿಬಿರಗಳಿಂದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿ ವ್ಯಕ್ತಿತ್ವ ವಿಕಸನವಾಗಲು ಕಾರಣವಾಗುತ್ತದೆ ಎಂದರು.
ಶಾಲಾ ಆವರಣದಲ್ಲಿ ಗೊಡಬನಾಳ್ ಗ್ರಾಮ ಪಂಚಾಯಿತಿ ಸದಸ್ಯರಾದ ಪಂಡರಹಳ್ಳಿಯ ಸವಿತಾಬಾಯಿಉಮೇಶ್ ನಾಯ್ಕ ಅವರು ಧ್ಜಜಾರೋಹಣ ನೇರವೇರಿಸಿದರು.
ನಂತರ ಆದಿಚುಂಚನಗಿರಿ ಪಾಲಿಟೆಕ್ನಿಕ್ ನ ಗ್ರಂಥಪಾಲಕರಾದ ಆರ್.ಸಿ. ಚಳಗೇರಿ ಅವರು ಶಿಬಿರಾರ್ಥಿಗಳಿಗೆ ಯೋಗಾಸನ ಅದರ ಮಹತ್ವ ಜೊತೆಗೆ ಸೂತ ನೀತಿ ಮತ್ತು ಜಲನೀತಿಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.
ಅದಾದ ನಂತರ ಗ್ರಾಮದ ಬೀದಿಗಳಲ್ಲಿ ಶಿಬಿರಾರ್ಥಿಗಳು ಶಿಬಿರಾಧಿಕಾರಿಗಳು, ಮೇಲ್ವಿಚಾರಕರು ಹಾಗೂ ಗ್ರಾಮದ ಮುಖಂಡರುಗಳ ನೇತೃತ್ವದಲ್ಲಿ ಸ್ವಚ್ಛತೆಯಲ್ಲಿ ಭಾಗವಹಿಸಿದ್ದರು. ಪ್ಲಾಸ್ಟಿಕ್ ನಿಂದಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಜಾಥಾದ ಮೂಲಕ ಪಥಸಂಚಲನ ಮಾಡಿದರು.
ಮುಖ್ಯ ಅತಿಥಿಗಳಾಗಿ ಕಾಲೇಜಿನ ಹಿರಿಯ ಉಪನ್ಯಾಸಕರುಗಳಾದ ಪಿ. ಧರ್ಮೇಂದ್ರ ಹಾಗೂ ಹೆಚ್. ಜೆ.ಗಂಗಾಧರ ಅವರುಗಳು ಭಾಗವಹಿಸಿದ್ದರು.
ಶಿಬಿರಾರ್ಥಿಗಳಾದ ಮನೋಜ್ ಹೆಚ್. ಕೆ. ಸ್ವಾಗತಿಸಿದರು. ಶಿಬಿರದ ಮೇಲ್ವಿಚಾರಕ ಕೆ.ಸುರೇಶ್ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಶರಣು ಸಮರ್ಪಣೆ ಮಾಡಿದರು.ಸಮಾರಂಭದ ನಂತರ ಹಾಸ್ಯ ಸಾಹಿತಿ ಬಿ. ತಿಪ್ಪೇರುದ್ರಪ್ಪ ವಿರಚಿತ ಕೋಟು ನಾಟಕವನ್ನು ಚಿತ್ರದುರ್ಗದ ಬಹುಮುಖಿ ಕಲಾತಂಡದ ಕಲಾವಿದರು ಎಂ.ಎನ್ .ಮಂಜುನಾಥ್ ಅವರ ನಿರ್ದೇಶನದಲ್ಲಿ ಅಭಿನಯಿಸಿದರು.