ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿಯು ಅಭ್ಯರ್ಥಿಗಳ ಐದನೇ ಪಟ್ಟಿ ಬಿಡುಗಡೆ ಮಾಡಿದ್ದು, ಕರ್ನಾಟಕದ ನಾಲ್ಕು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ.
ಬೆಳಗಾವಿಯಿಂದ ಜಗದೀಶ್ ಶೆಟ್ಟರ್ , ರಾಯಚೂರು- ರಾಜಾ ಅಮರೇಶ್ವರ ನಾಯಕ್, ಉತ್ತರ ಕನ್ನಡ- ವಿಶ್ವೇಶ್ವರ ಹೆಗಡೆ ಕಾಗೇರಿ , ಚಿಕ್ಕಬಳ್ಳಾಪುರದಿಂದ ಡಾ. ಕೆ.ಸುಧಾಕರ್ ಎಂಬ ಅವರಿಗೆ ಟಿಕೆಟ್ ನೀಡಿದೆ.
ಚಿತ್ರದುರ್ಗ ಕ್ಷೇತ್ರದ ಟಿಕೆಟ್ ಅನ್ನು ಬಿಜೆಪಿ ಕಾಯ್ದಿರಿಸಿದೆ. ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಹಾಲಿ ಸಂಸದ ಎ.ನಾರಾಯಣ ಸ್ವಾಮಿ ವರ್ಸಸ್ ಜನಾರ್ದನ ಸ್ವಾಮಿ ಮಧ್ಯೆ ತೀವ್ರ ಪೈಪೋಟಿ ಇದೆ. ಜನಾರ್ದನ ಸ್ವಾಮಿ ಪರ ಸಂಘ ಪರಿವಾರ ನಿಂತಿದೆ. ಇದರ ಮಧ್ಯೆ ಗೋವಿಂದ ಕಾರಜೋಳ ಹೆಸರು ಕೂಡ ಕೇಳಿಬರುತ್ತಿದೆ. ಹೀಗಾಗಿ ಪಕ್ಷದ ಯಾರಿಗೆ ಮಣೆ ಹಾಕುತ್ತದೆ ಎಂಬುದು ಕುತೂಹಲ ಮೂಡಿಸಿದೆ.
ಇತ್ತ ಉತ್ತರ ಕನ್ನಡ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ಮಿಸ್ ಆಗಿದೆ. ಕ್ಷೇತ್ರದಲ್ಲಿ ಕಾರ್ಯಕರ್ತರಿಂದಲೇ ಹೆಗಡೆ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಅವರ ಬದಲಿಗೆ ವಿಧಾನಸಭಾ ಮಾಜಿ ಸಭಾಧ್ಯಕ್ಷ ಕಾಗೇರಗೆ ಈ ಬಾರಿ ಪಕ್ಷ ಮಣೆ ಹಾಕಿದೆ.
ಚಿಕ್ಕಬಳ್ಳಾಪುರಕ್ಕೆ ಹೈಕಮಾಂಡ್ ಕೋಟಾದಲ್ಲಿ ಟಿಕೆಟ್ ಹಂಚಿಕೆ ಮಾಡಲಾಗಿದೆ. ಡಾ. ಕೆ.ಸುಧಾಕರ್‌ಗೆ ಟಿಕೆಟ್ ಹೈಕಮಾಂಡ್ ಕೋಟಾದಲ್ಲಿ ನೀಡಿದೆ ಎನ್ನಲಾಗಿದೆ. ಸ್ಥಳೀಯವಾಗಿ ಸುಧಾಕರ್ ಪ್ರಭಾವ ಮತ್ತು ಬಿಜೆಪಿ ಕೋಟೆ ಎಂಬ ಲೆಕ್ಕಾಚಾರದಲ್ಲಿ ಟಿಕೆಟ್ ನೀಡಲಾಗಿದೆ.
ಇನ್ನು ಬೆಳಗಾವಿಯಲ್ಲಿ ಹಾಲಿ ಸಂಸದೆ ಮಂಗಳಾ ಅಂಗಡಿ ಬದಲು ಜಗದೀಶ್ ಶೆಟ್ಟರ್‌ಗೆ ಪಕ್ಷ ಮಣೆ ಹಾಕಿದೆ. ಸ್ಥಳೀಯರ ವಿರೋಧದ ಮಧ್ಯೆಯೂ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ವಾಪಸ್ ಆಗಿದ್ದ ಜಗದೀಶ್ ಶೆಟ್ಟರ್‌ಗೆ ಬೆಳಗಾವಿ ಟಿಕೆಟ್ ನೀಡಲಾಗಿದೆ. ಯಡಿಯೂರಪ್ಪ ಒತ್ತಾಯದ ಮೇರೆಗೆ ಶೆಟ್ಟರ್‌ಗೆ ಟಿಕೆಟ್ ಸಿಕ್ಕಿದೆ. ಸ್ಥಳೀಯ ನಾಯಕರ ಜೊತೆ ಮಾಜಿ ಸಿಎಂ ಯಡಿಯೂರಪ್ಪ ಸಮಾಲೋಚನೆಗೆ ನಿರ್ಧಾರ ಮಾಡಿದ್ದಾರೆ. ಮುಂದಿನ ವಾರವೇ ಬೆಳಗಾವಿ ಸಂಧಾನ ಕಸರತ್ತು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.