ಬೆಂಗಳೂರು : ಜನಾರ್ದನ ರೆಡ್ಡಿ ಮರಳಿದ್ದು ಬಿಜೆಪಿಗೆ ದೊಡ್ಡ ಶಕ್ತಿ ಬಂದಂತಾಗಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಕ್ಕೆ ಐತಿಹಾಸಿಕ ಗೆಲುವು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ರೆಡ್ಡಿ ಅವರು ಬಿಜೆಪಿ ಜೊತೆ ತಮ್ಮ ಪಕ್ಷವನ್ನು ವಿಲೀನ ಮಾಡಿದ್ದಾರೆ. ಜನಾರ್ದನ ರೆಡ್ಡಿಯವರ ಪತ್ನಿ ಅರುಣ ಲಕ್ಷ್ಮಿ, ಮಾಜಿ ಸಚಿವ ಟಿ.ಜಾನ್ ಅವರ ಪುತ್ರ ಡಾ.ಥಾಮಸ್ ಜಾನ್ ಅವರೂ ಬಿಜೆಪಿ ಸೇರಿಸುವುದು ಸಂತಸ ತಂದಿದೆ ಎಂದರು.
ಜನಾರ್ದನ ರೆಡ್ಡಿ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿದ್ದಾರೆ. ಇದರಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಮಾಡುವ ದೃಷ್ಟಿಯಿಂದ ಅವರು ಬಿಜೆಪಿ ಸೇರಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಪರವಾದ ವಾತಾವರಣವಿದೆ. ಮುಂದಿನ ಲೋಕಸಭಾ ಚುನಾವಣೆಯು ದೇಶದ ಭವಿಷ್ಯ ರೂಪಿಸಲಿದೆ. ಪಕ್ಷದ ಹಿತದೃಷ್ಟಿ, ಏಳಿಗೆಗಾಗಿ ಎಲ್ಲರನ್ನೂ ತೊಡಗಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದರು.
ಬಳಿಕ ಶಾಸಕ ಜನಾರ್ದನ ರೆಡ್ಡಿ ಮಾತನಾಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ವಿಲೀನ ಮಾಡಿದ್ದೇವೆ. ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು, ಬೆಂಬಲಿಗರು ಯಡಿಯೂರಪ್ಪ ಅವರ ಆಶೀರ್ವಾದ, ವಿಜಯೇಂದ್ರರ ನೇತೃತ್ವದಲ್ಲಿ ಬಿಜೆಪಿ ಸೇರಿದ್ದೇವೆ ಎಂದು ತಿಳಿಸಿದರು.
ದೇಶದ ಸಮಗ್ರತೆ, ಸರ್ವತೋಮುಖ ಅಭಿವೃದ್ಧಿಗೆ, ವಿಶ್ವಗುರುವಾಗಿ ಭಾರತವನ್ನು ತರುವ ನಿಟ್ಟಿನಲ್ಲಿ ಕೆಲಸ ಮಾಡಿದ ನರೇಂದ್ರ ಮೋದಿ ಜೀ ಅವರ ಕೈಯನ್ನು ಬಲಪಡಿಸಲು ಬಿಜೆಪಿ ಸೇರಿದ್ದೇವೆ. ಅಮಿತ್ ಶಾ ಜೀ ಅವರು ನನ್ನನ್ನು ದೆಹಲಿಗೆ ಆಹ್ವಾನಿಸಿ, ಬಿಜೆಪಿ ಸೇರಲು ತಿಳಿಸಿದ್ದರು. ಅವರ ಮೇಲಿನ ಪ್ರೀತಿಯಿಂದ ಬಿಜೆಪಿ ಸೇರಿದ್ದೇನೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ಸಂಸದರಾದ ಪಿಸಿ ಮೋಹನ್, ದೇವೇಂದ್ರಪ್ಪ, ಕರ್ನಾಟಕ ಸಹ ಉಸ್ತುವಾರಿ ಸುಧಾಕರ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು, ಮುಖ್ಯ ಸಚೇತಕ ಎನ್ ರವಿಕುಮಾರ್, ಕೊಪ್ಪಳ ಜಿಲ್ಲಾಧ್ಯಕ್ಷ ನವೀನ್, ಮಾಜಿ ಸಚಿವ ಆನಂದ್ ಸಿಂಗ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.