ಧಾರವಾಡ : ಕಳೆದ 3-4 ದಿನಗಳಿಂದ ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಮನಸೂರ ಸುತ್ತಮುತ್ತಲೂ ಚಿರತೆ ಕಾಣಿಸಿಕೊಂಡು ಮನಸೂರ ಗ್ರಾಮದ ಕುಬೇರಪ್ಪ ಮಡಿವಾಳಪ್ಪ ಅಗಸರ ಎಂಬುವವರ ಆಕಳ ಕರುವನ್ನು ಕೊಂದು ತಿಂದಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು.
ಮನಸೂರ, ಮನಗುಂಡಿ ಹಾಗೂ ಸುತ್ತಲಿನ ಐದಾರು ಗ್ರಾಮಗಳಲ್ಲಿ ಡಂಗುರ ಸಾರುವಂತೆ ಹಾಗೂ ಗ್ರಾಮಸ್ಥರು ಒಬ್ಬಂಟಿಯಾಗಿ ಓಡಾಡದಂತೆ ಜಾಗೃತಿ ಮೂಡಿಸುವಂತೆ ಸ್ಥಳದಲ್ಲಿ ಉಪಸ್ಥಿತರಿದ್ದ, ತಹಶಿಲ್ದಾರ ಡಾ. ದುಂಡಪ್ಪ ಹೂಗಾರ ಹಾಗೂ ವಲಯ ಅರಣ್ಯ ಅಧಿಕಾರಿ ಪ್ರದೀಪ ಪವಾರ ಅವರಿಗೆ ಸೂಚಿಸಿದರಲ್ಲದೆ, ಚಿರತೆ ದಾಳಿಯಿಂದ ಮೃತ ಪಟ್ಟ ಆಕಳಿನ ಮಾಲೀಕರಿಗೆ ಶೀಘ್ರದಲ್ಲಿ ಪರಿಹಾರ ನೀಡುವಂತೆ ಅವರು ಸೂಚಿಸಿದರು.
ಚಿರತೆ ಸೆರೆಹಿಡಿಯಲು ಇಡಲಾಗಿದ್ದ ಬೋನ್ ವೀಕ್ಷಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ಗ್ರಾಮಸ್ಥರನ್ನು ಮಾತನಾಡಿಸಿ ಅರಣ್ಯ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ಚಿರತೆಯ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದು, ಗ್ರಾಮಸ್ಥರು ಆತಂಕ ಪಡಬಾರದೆಂದು ತಿಳಿಸಿದರು. ಸಂಜೆ ಹಾಗೂ ರಾತ್ರಿ ವೇಳೆಯಲ್ಲಿ ಒಬ್ಬಂಟಿಯಾಗಿ ತಿರುಗಾಡದಂತೆ ತಿಳಿಸಿದರು.
ಸಾಧ್ಯವಾದಷ್ಟು ದನಕರುಗಳನ್ನು ಮನೆಯ ಹತ್ತಿರವೇ ಇಟ್ಟುಕೊಳ್ಳುವಂತೆ ತಿಳಿಸಿದರು. ಸದ್ಯ ಮನಸೂರ ಗ್ರಾಮದಲ್ಲಿ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಐ.ಪಿ ಸೆಟ್‍ಗಾಗಿ ಬೆಳಗಿನ ಅವಧಿಯಲ್ಲಿ ವಿದ್ಯುತ್ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಕಾಡು ಪ್ರದೇಶದ ಗ್ರಾಮಗಳಲ್ಲಿ ಹೆಚ್ಚಿನ ಗಮನ ಹರಿಸುವಂತೆ ಅರಣ್ಯಾಧಿಕಾರಿಗಳಿಗೆ ಸೂಚಿಸಿದರು.
ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿಗಾಗಿ ನೀರಿನ ತೊಟ್ಟಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಈ ವರ್ಷ ಬರಗಾಲದಿಂದಾಗಿ ಅರಣ್ಯ ಪ್ರದೇಶದಲ್ಲಿ ಕೆರೆ ಹಳ್ಳ ಕೊಳ್ಳಗಳು ಬತ್ತಿಹೋಗಿವೆ. ಕಾಡು ಪ್ರಾಣಿಗಳಿಗೆ ಕುಡಿಯಲು ನೀರಿನ ಸಮಸ್ಯೆಯಾಗಿ ನಾಡಿಗೆ ಪ್ರಾಣಿಗಳು ಬರುತ್ತಿವೆ. ಎಂದು ಅರಣ್ಯಾಧಿಕಾರಿಗಳು ತಿಳಿಸಿದರು. ಚಿರತೆ ಹಿಡಿಯಲು ಶೀಘ್ರವೇ ಇನ್ನೊಂದು ಕಡಿಮೆ ಭಾರವುಳ್ಳ ಹಗುರವಾದ ಬೋನ್ ಇಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯಾಧಿಕಾರಿ ಪ್ರದೀಪ್ ಪವಾರ್ ತಿಳಿಸಿದರು.
ಧಾರವಾಡ ತಹಶೀಲ್ದಾರ್ ಡಾ:ದುಂಡಪ್ಪ ಹೂಗಾರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳದಲ್ಲಿ ಉಪಸ್ಥಿತರಿದ್ದ