ಮಗುವನ್ನು ಅಕ್ರಮವಾಗಿ ಸಾಕುವ ಪ್ರಕರಣಕ್ಕೆ ಸಂಬಂಧಿಸಿದಂತೆ ರೀಲ್ಸ್ ರಾಣಿ ಸೋನು ಗೌಡಗೆ ಸಿಜೆಎಂ ಕೋರ್ಟ್ ನ್ಯಾಯಾಧೀಶರು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ ಒಪ್ಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿ ಪಡೆದಿದ್ದರು ಪೊಲೀಸರು. ಇಂದು ಪೊಲೀಸ್ ಕಸ್ಟಡಿ ಅಂತ್ಯವಾಗಿತ್ತು.
ಕಾನೂನು ಬಾಹಿರವಾಗಿ ಮಗುವನ್ನ ದತ್ತು ತೆಗೆದುಕೊಂಡು ಪೊಲೀಸ್ ವಶದಲ್ಲಿದ್ದ ಸೋನು ಶ್ರೀನಿವಾಸಗೌಡರನ್ನು ಬೆಂಗಳೂರಿನ ಬ್ಯಾಡರಳ್ಳಿ ಪೊಲೀಸರು ನಿನ್ನೆ (ಮಾ.24) ರಾಯಚೂರಿನ ಮಸ್ಕಿ ತಾಲೂಕಿನ ಕಾಚಾಪುರಕ್ಕೆ ಕರೆದುಕೊಂಡು ಬಂದ ಸ್ಥಳ ಮಹಜರು ಮಾಡಿದ್ದರು. ಬಾಲಕಿ ಚಿಕ್ಕಪ್ಪನ ಮನೆಗೆ ಬಂದ ಪೊಲೀಸರು ಕೆಲವೇ ಕ್ಷಣದಲ್ಲಿ ಮಾಹಿತಿ ಕಲೆಹಾಕಿ ಅವಸರದಲ್ಲಿ ಗ್ರಾಮದಿಂದ ಹೊರನಡೆದಿದ್ದರು. ಈ ವೇಳೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸೋನು ಗೌಡ ಇದ್ದ ಕಾರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿದ್ದರು.
ಸ್ಥಳ ಮಹಜರು ಮಾಡಲು ಪೋಲಿಸರು ಭೇಟಿ ನೀಡಿದ ಬಳಿಕ ಸೋನು ಗೌಡ ಜೊತೆ ಮಾತನಾಡಬೇಕು ಅಂತ ಗ್ರಾಮಸ್ಥರು ಗಲಾಟೆ ಮಾಡಿದರು. ಪೊಲೀಸ್ ಕಾರಿಗೆ ಮುತ್ತಿಗೆ ಹಾಕಿ ಸೋನು ಗೌಡರನ್ನು ನೋಡಲು ನೂಕುನುಗ್ಗಲು ಮಾಡಿದರು. ಗ್ರಾಮಸ್ಥರು ಹಾಗೂ ಬಾಲಕಿ ಸಂಬಂಧಿಕರಿಂದ ಮಾಹಿತಿ ಪಡೆದ ಪೊಲೀಸರು ಸುಮಾರು ಇಪ್ಪತ್ತು ನಿಮಿಷಗಳಲ್ಲಿ ಸ್ಥಳ ಮಹಜರು ಮುಗಿಸಿ ವಾಪಸ್ ನಿನ್ನೆ ಬೆಂಗಳೂರಿಗೆ ತೆರಳಿದ್ದರು.
ಈ ಮಧ್ಯೆ ಮಗುವಿನ ಚಿಕ್ಕಪ್ಪ ಸೋನುಗೌಡ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗುವನ್ನ ನಾವು ದತ್ತು ನೀಡಿಲ್ಲ, ಆಕೆ ನಮಗೆ ಯಾವುದೇ ಹಣದ ಸಹಾಯ ಮಾಡಿಲ್ಲ. ನಮ್ಮ ಮಗಳನ್ನು ಓದಿಸುತ್ತೇನೆ. ಚೆನ್ನಾಗಿ ಸಾಕುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ. ಈಗ ದತ್ತು ತೆಗೆದುಕೊಂಡಿದ್ದೇನೆ ಅಂತ ಹೇಳಿರುವುದು ಸರಿಯಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು.