ಬೆಂಗಳೂರು, ಮಾರ್ಚ್ 26 : ಪೊಲೀಸ್ ಠಾಣೆಗಳಲ್ಲಿನ ಹೀನಾಯ ಪರಿಸ್ಥಿತಿಯು ಸಾಮಾನ್ಯ ಜನರಿಗೆ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವಂತೆ ಮಾಡಿದೆ. ಪೊಲೀಸರು ವಿನಮ್ರ, ಪ್ರಾಮಾಣಿಕ, ಸೇವಾ ಮನೋಭಾವದವರಾಗಿ ಅಮಾಯಕರನ್ನು ರಕ್ಷಿಸಬೇಕು.
ಆದರೆ ದುರದೃಷ್ಟವಶಾತ್, ಭ್ರಷ್ಟಾಚಾರದಿಂದಾಗಿ ಪೊಲೀಸ್ ಠಾಣೆಗಳು ವ್ಯಾಪಾರ ಕೇಂದ್ರಗಳಾಗಿ ಮಾರ್ಪಟ್ಟಿವೆ. ಇದನ್ನು ನಿಲ್ಲಿಸದಿದ್ದರೆ, ಇದು ಖಂಡಿತವಾಗಿಯೂ ಸವಾಲಾಗಿ ಪರಿಣಮಿಸುತ್ತದೆ ಮತ್ತು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ. ಅಲ್ಲಿ ಧ್ವನಿಯಿಲ್ಲದ, ಅಸಹಾಯಕ ಮತ್ತು ಬಡ ಪೊಲೀಸ್ ಸಿಬ್ಬಂದಿ ಅಧಿಕಾರಿಗಳಿಗೆ ಬಲಿಪಶುಗಳಾಗುವ ಸಾಧ್ಯತೆಯಿದೆ ಎಂದು ಲೋಕಾಯುಕ್ತ ನ್ಯಾಯಾಲಯ ಹೇಳಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಪಡೆಯುವವರೆಗೆ ಆರೋಪಿತ ದಂಪತಿಯನ್ನು ಬಂಧಿಸದಿರಲು 50,000 ರೂ. ಗಳನ್ನು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಂದ ಬಂಧಿಸಲ್ಪಟ್ಟ ಕೆಆರ್ ಪುರಂ ಪೊಲೀಸ್ ಇನ್ಸಪೆಕ್ಟರ್ ವಜ್ರಮುನಿ ಕೆ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಲೋಕಾಯುಕ್ತ ನ್ಯಾಯಾಲಯ ಈ ಅಭಿಪ್ರಾಯಪಟ್ಟಿದೆ.
ಆರೋಪಿಗಳಿಗೆ ಜಾಮೀನು ನೀಡಿದರೆ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಮತ್ತು ತನಿಖೆಗೆ ಅಡ್ಡಿಯಾಗಬಹುದು. ಅಲ್ಲದೆ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸುವವರೆಗೆ ಮತ್ತು ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಅಂತ ತಿಳಿಯಲು ಇನ್ಸ್‌ಪೆಕ್ಟರ್‌ನ ಕಸ್ಟಡಿ ವಿಚಾರಣೆ ಅಗತ್ಯವಾಗಿದೆ ಎಂದು ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ವಜ್ರಮುನಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಲಂಚ ಪ್ರಕರಣದಲ್ಲಿ ಬಂಧಿತರಾಗಿರುವ ಕೆಆರ್ ಪುರಂ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಮ್ಯಾ ಎನ್ ಅವರು ಗರ್ಭಿಣಿ ಮತ್ತು ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕೆಆರ್ ಪುರಂ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಮ್ಯಾ ಎನ್ 12 ರಂದು ಆರೋಪಿತ ದಂಪತಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಆರೋಪಿಗಳ ಪರ ವಕೀಲರು ಠಾಣೆಗೆ ಭೇಟಿ ನೀಡಿದಾಗ, ಸಬ್ ಇನ್ಸ್ ಪೆಕ್ಟರ್ ರಮ್ಯಾ ಎನ್ “ನಿರೀಕ್ಷಣಾ ಜಾಮೀನು ಪಡೆಯುವವರೆಗೆ ಆರೋಪಿಗಳನ್ನು ಬಂಧಿಸದಿರಲು 5 ಲಕ್ಷ ರೂ. ಲಂಚ ಕೇಳಿದ್ದರು”. ಮಾತಕತೆ ಬಳಿಕ ರಮ್ಯಾ ಎನ್ ಎರಡು ಲಕ್ಷ ರೂ.ಗೆ ಒಪ್ಪಿಕೊಂಡರು.
ಈ ಎರಡು ಲಕ್ಷ ರೂ. ನಲ್ಲಿ ರಮ್ಯಾ ಎನ್ಕೆ 50 ಸಾವಿರ ರೂ. ಲಂಚ ಪಡೆದಿದ್ದು, ಉಳಿದ ಹಣ ಪೊಲೀಸ್ ಇನ್ಸಪೆಕ್ಟರ್ ವಜ್ರಮುನಿ ಕೆ ಅವರಿಗೆ ಕೊಡಬೇಕಿತ್ತು. ರಮ್ಯ ಎನ್ ಮತ್ತು ವಜ್ರಮುನಿ ಕೆ. ಆರೋಪಿಗಳಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ, ಬಂಧಿಸಿದ್ದಾರೆ.