ಚಿತ್ರದುರ್ಗ, ಮಾರ್ಚ್. 26 : ನಾಯಕನಹಟ್ಟಿಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ರಥೋತ್ಸವ ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ರಥೋತ್ಸವಕ್ಕೆ ಬೆಳಿಗ್ಗೆಯಿಂದಲೇ ಲಕ್ಷಾಂತರ ಭಕ್ತರು ಸಾಗರೋಪದಿಯಲ್ಲಿ ಸೇರಿದ್ದರು. ಪವಾಡಗಳ ಮೂಲಕ ಮಧ್ಯ ಕರ್ನಾಟಕ ಜನಮಾನದಲ್ಲಿ ನೆಲೆ ನಿಂತಿರುವ ಶ್ರೀ ಸ್ವಾಮಿಯ ರಥೋತ್ಸವ ಮಧ್ಯಾಹ್ನ 3.15 ಗಂಟೆಗೆ ಚಿತ್ತಾ ನಕ್ಷತ್ರದಲ್ಲಿ ಭಕ್ತರು ಎಳೆದರು. ಈ ವೇಳೆ ಸಾಹಸ್ರಾರು ಭಕ್ತರು ರಥವನ್ನು ಎಳೆಯುವ ಮೂಲಕ ಭಕ್ತಿಭಾವದ ಸಮರ್ಪಣೆ ಅರ್ಪಿಸಿದರು.
ಶ್ರೀ ತಿಪ್ಪೇರುದ್ರಸ್ವಾಮಿಯ ಜಾತ್ರೆಯ ಮುಕ್ತಿ ಬಾವುಟ ಹರಾಜು ಪ್ರಕ್ರಿಯೆ ಪ್ರಕ್ರಿಯೆಯಲ್ಲಿ ದೇವರ ಮುಕ್ತಿ ಬಾವುಟ ಪಡೆಯಲು ಹಲವಾರು ಭಾಗಿಯಾಗಿದ್ದರು. ಅಂತಿಮವಾಗಿ ಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಈ ಬಾರಿಯ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮುಕ್ತಿ ಬಾವುಟವನ್ನು ಹರಾಜಿನಲ್ಲಿ ರೂ.61 ಲಕ್ಷಕ್ಕೆ ಕೂಗಿ ತಮ್ಮದಾಗಿಸಿಕೊಂಡರು. ಕಳೆದ ವರ್ಷವೂ ಸಚಿವರೇ ಹರಾಜಿನಲ್ಲಿ ರೂ.55 ಲಕ್ಷಕ್ಕೆ ಮುಕ್ತಿ ಬಾವುಟ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಹೊರಮಠ ಹಾಗೂ ಒಳಮಠ ಎರಡೂ ಕಡೆಗಳಲ್ಲಿ ಬೆಳಗ್ಗೆಯಿಂದಲೇ ಬಿಡುವಿಲ್ಲದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪುಳಕಿತರಾದರು.
ಬಳ್ಳಾರಿ, ರಾಯಚೂರು, ತುಮಕೂರು, ಕೊಪ್ಪಳ, ಗದಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ಅಕ್ಕಪಕ್ಕದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದಿಂದಲೂ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ ಸ್ವಾಮಿಯ ದರ್ಶನ ಪಡೆದರು.
ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಕ್ರಮಕೈಗೊಂಡಿತ್ತು.